Share News

ಶಿವಮೊಗ್ಗ: ತಾಲೂಕಿನ ಉಂಬಳೇಬೈಲು ವಲಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಮಿಂಚಿನ ದಾಳಿ ನಡೆಸಿ, ಮನೆಯೊಂದರ ಬಚ್ಚಲು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಜಿಂಕೆ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ.

​ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ:

ಸೆಪ್ಟೆಂಬರ್ 18ರಂದು ಉಂಬಳೇಬೈಲು ವಲಯದ ರಾತ್ರಿ ಗಸ್ತು ಸಿಬ್ಬಂದಿ ಹಾಗೂ ಲಕ್ಕಿನಕೊಪ್ಪ ಶಾಖೆಯ ಅರಣ್ಯಾಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಸ್ಥಳೀಯ ನಿವಾಸಿ ಸೇತು ಬಿನ್ ಮಾಣಿಕ್ಯ (46) ಅವರ ಮನೆ ಮೇಲೆ ಏಕಾಏಕಿ ದಾಳಿ ನಡೆಸಲಾಯಿತು.

​ಬಚ್ಚಲು ಮನೆಯಲ್ಲಿ ಪತ್ತೆಯಾಯ್ತು ಜಿಂಕೆ ಮಾಂಸ:

ಮನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳಿಗೆ ಬಚ್ಚಲು ಮನೆಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಜಿಂಕೆ ಮಾಂಸ ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಮಾಂಸವನ್ನು ಜಪ್ತಿ ಮಾಡಿದ್ದಾರೆ.

​ಪ್ರಕರಣ ದಾಖಲು, ತನಿಖೆ ಚುರುಕು:

ಘಟನಾ ಸ್ಥಳದಲ್ಲಿದ್ದ ತಂದೆ ಮತ್ತು ಮಗನನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಂಕೆ ಬೇಟೆಯಾಡಿದ ಮೂಲ ಹಾಗೂ ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಇತರೆ ವ್ಯಕ್ತಿಗಳ ಕುರಿತು ತೀವ್ರ ತನಿಖೆ ಮುಂದುವರಿಸಿದ್ದಾರೆ.


Share News