Share News

ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿರುವ ಜೀವನಭೀಮಾನಗರ ಠಾಣೆ ಪೊಲೀಸರು, ಇಬ್ಬರು ಸ್ಥಳೀಯ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹43 ಲಕ್ಷ ಮಾರುಕಟ್ಟೆ ಮೌಲ್ಯದ 150 ಗ್ರಾಂ ಆಂಫಿಟಮೈನ್ (AMPHETAMINE), 264 ಗ್ರಾಂ ಅನುಮಾನಾಸ್ಪದ ಮಾದಕವಸ್ತು, ಬೈಕ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

​ಪ್ರಕರಣದ ಹಿನ್ನೆಲೆ ಹಾಗೂ ಮಿಂಚಿನ ದಾಳಿ:

ಜೀವನಭೀಮಾನಗರ ಪೊಲೀಸ್ ಠಾಣಾ ಸರಹದ್ದಿನ ದೊಮ್ಮಲೂರು ರಿಂಗ್‌ರಸ್ತೆಯ ಸರ್ವೀಸ್ ರಸ್ತೆಯ ಖಾಲಿ ಜಾಗದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸೆಪ್ಟೆಂಬರ್ 19, 2026ರಂದು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 32 ಗ್ರಾಂ ಆಂಫಿಟಮೈನ್, 1 ದ್ವಿಚಕ್ರ ವಾಹನ ಹಾಗೂ 2 ಮೊಬೈಲ್ ಪೋನ್‌ಗಳ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

​ವಿವೇಕನಗರದ ಮನೆಯಲ್ಲಿ ಡ್ರಗ್ಸ್ ದಾಸ್ತಾನು:

ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಸುಲಭವಾಗಿ ಹೆಚ್ಚಿನ ಹಣ ಗಳಿಸುವ ದುರಾಶೆಯಿಂದ ಹೊರರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

​ಆರೋಪಿಗಳು ನೀಡಿದ ಸುಳಿವು ಆಧರಿಸಿ ವಿವೇಕನಗರದಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಬಾಂಚಿಸಿಟ್ಟಿದ್ದ ಉಳಿದ 118 ಗ್ರಾಂ ಆಂಫಿಟಮೈನ್ ಹಾಗೂ 264 ಗ್ರಾಂ ಅನುಮಾನಾಸ್ಪದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

​ನ್ಯಾಯಾಂಗ ಬಂಧನ:

ಸೆಪ್ಟೆಂಬರ್ 20, 2026ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಸೆಪ್ಟೆಂಬರ್ 22, 2026ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜಪ್ತಿಯಾದ ಒಟ್ಟು ಸ್ವತ್ತುಗಳ ಸರ್ಕಾರಿ ಮೌಲ್ಯ ₹24 ಲಕ್ಷವಾಗಿದ್ದು, ಮಾರುಕಟ್ಟೆ ಮೌಲ್ಯ ಸುಮಾರು ₹43 ಲಕ್ಷ ಎಂದು ಅಂದಾಜಿಸಲಾಗಿದೆ.

​ಪೊಲೀಸ್ ತಂಡಕ್ಕೆ ಶ್ಲಾಘನೆ:

ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಅಮಟೆ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹಲಸೂರು ಉಪ ವಿಭಾಗದ ಎಸಿಪಿ ಶ್ರೀ ಬಾಲಕೃಷ್ಣ ಸಿ. ಅವರ ನೇತೃತ್ವದಲ್ಲಿ, ಜೀವನಭೀಮಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರವೀಣ್ ಕುಮಾರ್ ಟಿ.ಎಲ್. ಹಾಗೂ ಸಿಬ್ಬಂದಿಗಳ ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.


Share News