Share News

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಹುಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಿ ಜಾಲದ ಪ್ರಮುಖ ಸೂತ್ರಧಾರ (ಕಿಂಗ್‌ಪಿನ್) ಆರ್. ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ (SIT) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

​ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ:

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಪ್ರಶಾಂತ್ ಭಾರತದಿಂದ ತಲೆಮರೆಸಿಕೊಂಡು ಅಜರ್‌ಬೈಜಾನ್‌ನಲ್ಲಿ ಅಡಗಿ ಕುಳಿತಿದ್ದ. ಎಸ್‌ಐಟಿ ಅಧಿಕಾರಿಗಳು ಹೊರಡಿಸಿದ್ದ ‘ಲುಕ್‌ಔಟ್ ಸರ್ಕ್ಯುಲರ್’ ಆಧಾರದ ಮೇಲೆ, ಆತ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲೇ ಆತನನ್ನು ಸೆರೆಹಿಡಿಯಲಾಗಿದೆ.

​ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧಿ ದಂಧೆ:

ಆರೋಪಿಗಳು ಬಿಡದಿ ಹಾಗೂ ಹೆಜ್ಜಾಲ ಬಳಿಯ ಫಾರ್ಮ್‌ಹೌಸ್ ಒಂದರಲ್ಲಿ ನಕಲಿ ಹಾಗೂ ಅವಧಿ ಮುಗಿದ ಔಷಧಿಗಳನ್ನು ಅಕ್ರಮವಾಗಿ ಮರುಪ್ಯಾಕ್ ಮಾಡುವ ಜಾಲ ನಡೆಸುತ್ತಿದ್ದರು. ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ತರಿಸಿಕೊಳ್ಳುತ್ತಿದ್ದ ಕಳಪೆ ಔಷಧಿಗಳಿಗೆ ಫಿಜರ್‌ನಂತಹ ಜಾಗತಿಕ ಕಂಪನಿಗಳ ನಕಲಿ ಲೇಬಲ್ ಹಾಕಿ, ಕ್ಯಾನ್ಸರ್ ಹಾಗೂ ಐಸಿಯು ಘಟಕಗಳ ದುಬಾರಿ ಮದ್ದುಗಳೆಂದು ಬಿಂಬಿಸುತ್ತಿದ್ದರು. ಈ ನಕಲಿ ಔಷಧಿಗಳನ್ನು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಬೆಂಗಳೂರಿನ ಸುಮಾರು 90ಕ್ಕೂ ಹೆಚ್ಚು ಆಸ್ಪತ್ರೆಗಳು, ಕ್ಲಿನಿಕ್ ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ಪೂರೈಸಲಾಗಿತ್ತು.

​₹5 ಕೋಟಿ ಮೌಲ್ಯದ ಮದ್ದು ಜಪ್ತಿ, ಎಸ್‌ಐಟಿ ತನಿಖೆ:

ಆಗಸ್ಟ್ 18 ರಂದು ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಮಂಡಳಿ ನಡೆಸಿದ್ದ ಜಂಟಿ ದಾಳಿಯಲ್ಲಿ ₹5 ಕೋಟಿ ಮೌಲ್ಯದ ನಕಲಿ ಔಷಧಿಗಳನ್ನು ಜಪ್ತಿ ಮಾಡಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರ ಆರು ಸದಸ್ಯರ ಎಸ್‌ಐಟಿ ರಚಿಸಿತ್ತು. ಈಗಾಗಲೇ ಕೃಪಾ ಹೆಲ್ತ್‌ಕೇರ್ ಮಾಲೀಕ ವೀರೇಶ್ ಜೈನ್ ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಇದೀಗ ಮುಖ್ಯ ಸೂತ್ರಧಾರ ಪ್ರಶಾಂತ್ ಸಿಕ್ಕಿಬಿದ್ದಿರುವುದು ತನಿಖೆಗೆ ದೊಡ್ಡ ತಿರುವು ನೀಡಿದೆ.


Share News