Share News

ಬೆಂಗಳೂರು: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಬಿ. ಜಗಲಾಸರ್ ಅವರನ್ನು ನೇಮಕ ಮಾಡಲಾಗಿದೆ.

​ಪ್ರಕರಣದ ತೀವ್ರತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ ಎಸ್‍ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ತನಿಖಾಧಿಕಾರಿಗೆ ಸಹಾಯಕ ತನಿಖಾಧಿಕಾರಿಯಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರನ್ನು ನೇಮಿಸಲಾಗಿದ್ದು, ಓರ್ವ ಐಪಿಎಸ್ ಹಾಗೂ ಓರ್ವ ಕೆಎಸ್‌ಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ಮುಂದುವರಿಯಲಿದೆ.

​ತನಿಖಾಧಿಕಾರಿಯ ಹಿನ್ನೆಲೆ:

ಪ್ರಕರಣದ ತನಿಖೆಗೆ ತಾಂತ್ರಿಕ ಕ್ಷಮತೆ ಹೊಂದಿರುವ (Technically Capable) ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇಂಜಿನಿಯರಿಂಗ್ ಪದವೀಧರರಾಗಿರುವ ಲೋಕೇಶ್ ಬಿ. ಜಗಲಾಸರ್ ಅವರು ಈ ಹಿಂದೆ ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಎಸ್‌ಪಿಯಾಗಿ ಮತ್ತು ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಸಿಐಡಿಯಲ್ಲಿ (CID) ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಬೆಂಗಳೂರಿನಲ್ಲಿ ನಡೆದಿದ್ದ ₹7 ಕೋಟಿ ದರೋಡೆ ಪ್ರಕರಣ ಸೇರಿದಂತೆ ಹಲವು ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದರು.


Share News