ಬೆಂಗಳೂರು: ನಮ್ಮ-112 ತುರ್ತು ಸಹಾಯವಾಣಿಗೆ ಬಂದ ಕರೆಯನ್ನಾಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಕೆ.ಜಿ.ಹಳ್ಳಿ ಠಾಣೆಯ ಹೊಯ್ಸಳ ಪೊಲೀಸರು, ಕಾಣೆಯಾಗಿದ್ದ ₹35,000 ಮೌಲ್ಯದ ಕಬ್ಬಿಣದ ಗ್ರಿಲ್ಗಳನ್ನು ಕೇವಲ ಕೆಲವೇ ಅವಧಿಯಲ್ಲಿ ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ದಿನಾಂಕ 22/09/2026ರಂದು ಮಧ್ಯಾಹ್ನ ಸುಮಾರು 3:17 ಗಂಟೆಗೆ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶಾಲ ನಗರದ, ಮುತ್ತು ಮಾರಿಯಮ್ಮ ದೇವಸ್ಥಾನದ ಸಮೀಪದ ಎಎನ್ಪಿ ರಸ್ತೆಯಲ್ಲಿ ಸುರಕ್ಷತಾ ಕಬ್ಬಿಣದ ಗ್ರಿಲ್ಗಳು ಕಾಣೆಯಾಗಿರುವ ಬಗ್ಗೆ ಮಾಲೀಕರು ತುರ್ತು ಸಹಾಯವಾಣಿ ‘ನಮ್ಮ-112’ಕ್ಕೆ ಕರೆ ಮಾಡಿ ನೆರವು ಕೋರಿದ್ದರು.
ತಕ್ಷಣವೇ ಎಚ್ಚೆತ್ತ ‘ನಮ್ಮ-112’ ಸಿಬ್ಬಂದಿ, ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ಹೊಯ್ಸಳ-46ರ ಕರ್ತವ್ಯದಲ್ಲಿದ್ದ ಎಎಸ್ಐ ಮಹೇಶ್ ಹಾಗೂ ಹೆಡ್ ಕಾನ್ಸ್ಟೇಬಲ್ ಗೋಪಿ ಅವರಿಗೆ ಮಾಹಿತಿ ರವಾನಿಸಿದರು. ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಮಾಲೀಕರನ್ನು ವಿಚಾರಣೆ ನಡೆಸಿದರು.
ದೂರುದಾರರು ಒಟ್ಟು ₹50,000 ಮೌಲ್ಯದ ಮೂರು ಸುರಕ್ಷತಾ ಗ್ರಿಲ್ಗಳನ್ನು ಆಟೋರಿಕ್ಷಾದಲ್ಲಿ ತಂದು ಮನೆಯ ಮುಂದೆ ಇಳಿಸುತ್ತಿದ್ದರು. ಒಂದು ಗ್ರಿಲ್ ಅನ್ನು ಮನೆಯೊಳಗೆ ಇಟ್ಟು ಉಳಿದೆರಡು ಗ್ರಿಲ್ಗಳನ್ನು ತರಲು ಹೊರಬರುವಷ್ಟರಲ್ಲಿ, ಹೊರಗಿದ್ದ ₹35,000 ಮೌಲ್ಯದ ಎರಡು ಗ್ರಿಲ್ಗಳು ಕಾಣೆಯಾಗಿದ್ದವು.
ತ್ವರಿತ ಶೋಧ – ಆಸ್ತಿ ಹಸ್ತಾಂತರ:
ಕೂಡಲೇ ರಂಗಕ್ಕಿಳಿದ ಹೊಯ್ಸಳ ಸಿಬ್ಬಂದಿ, ಗ್ರಿಲ್ಗಳ ವಿವರಗಳನ್ನು ಪಡೆದು ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದರು. ದೂರುದಾರರ ಮನೆಯಿಂದ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯೊಳಗೆ ಕಾಣೆಯಾಗಿದ್ದ ಎರಡೂ ಕಬ್ಬಿಣದ ಗ್ರಿಲ್ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಪೊಲೀಸರು, ಅವುಗಳನ್ನು ಸುರಕ್ಷಿತವಾಗಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ‘ನಮ್ಮ-112’ ಸಹಾಯವಾಣಿಗೆ ತಕ್ಷಣ ಮಾಹಿತಿ ನೀಡುವುದರ ಮಹತ್ವ ಹಾಗೂ ಸಾರ್ವಜನಿಕರ ಆಸ್ತಿ ರಕ್ಷಣೆಯಲ್ಲಿ ಬೆಂಗಳೂರು ನಗರ ಪೊಲೀಸರ ತ್ವರಿತ ಮತ್ತು ದಕ್ಷ ಕಾರ್ಯವೈಖರಿಗೆ ಈ ಘಟನೆ ಸಾಕ್ಷಿಯಾಗಿದೆ.
Arakshakara Times Media
Related posts
