ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸ್ನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣವನ್ನು ತ್ವರಿತವಾಗಿ ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ₹2,00,000/- ಮೌಲ್ಯದ 15 ಗ್ರಾಂ 500 ಮಿಲಿ ತೂಕದ ಚಿನ್ನದ ಸರವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಅಕ್ಟೋಬರ್ 05ರಂದು ಬೆಳಿಗ್ಗೆ 6.45ರ ಸುಮಾರಿಗೆ ಕೆಜಿಎಫ್ನ ಅಂಬೇಡ್ಕರ್ ಭವನದ ಹಿಂಭಾಗದ ಖಾಲಿ ಜಾಗದಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದಲ್ಲಿ ದೋಣಿ ಪ್ರದರ್ಶನ ಮಾಡುತ್ತಿದ್ದ ಶಂಕರ್ ಸಾಗರ್ ಬೋಸೆ ಎಂಬುವವರಿಗೆ ನಾಲ್ವರು ಅಪರಿಚಿತರು ಕೈಗಳಿಂದ ಹಲ್ಲೆ ನಡೆಸಿದ್ದರು. ಅಲ್ಲದೆ, ಅವರ ಕುತ್ತಿಗೆಯಲ್ಲಿದ್ದ ಅಂದಾಜು ₹2 ಲಕ್ಷ ಬೆಲೆಬಾಳುವ 16 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ರಾಬರ್ಟ್ಸ್ನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 151/2026ರಡಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ಕಾರ್ಯಾಚರಣೆ ಹಾಗೂ ಬಂಧನ
ಪ್ರಕರಣದ ತನಿಖೆ ಕೈಗೊಂಡ ರಾಬರ್ಟ್ಸ್ನ್ಪೇಟೆ ವೃತ್ತ ಕಚೇರಿಯ ಸಿಪಿಐ ಅನಿಲ್ ಕುಮಾರ್ ಎಂ.ಎಸ್. ಅವರ ನೇತೃತ್ವದಲ್ಲಿ, ಪಿಎಸ್ಐ ಮಾಹೇಶ್ ಮಾಲಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಮುಖ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು:
ಕಾರ್ ಮೇಗನ್ @ ಅಪೇನ್ (28 ವರ್ಷ)
ಮಂಜುನಾಥ ಆರ್ @ ಮಂಜು (31 ವರ್ಷ)
ಸುನೀಲ್ ಕುಮಾರ್ @ ಚಿನ್ನ (40 ವರ್ಷ)
ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ.
ಅಧಿಕಾರಿಗಳ ಶ್ಲಾಘನೆ
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಾಜಪೂತ್, ಐ.ಪಿ.ಎಸ್. ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಲಕ್ಷ್ಮಯ್ಯ ವಿ. ಅವರ ನಿರ್ದೇಶನದಂತೆ ಕಾರ್ಯಾಚರಣೆ ಯಶಸ್ವಿಗೊಳಿಸಿದ ಸಿಪಿಐ ಅನಿಲ್ ಕುಮಾರ್ ಎಂ.ಎಸ್., ಪಿಎಸ್ಐ ಮಾಹೇಶ್ ಮಾಲಿ ಹಾಗೂ ಸಿಬ್ಬಂದಿಗಳಾದ ಗೋಪಿನಾಥ್, ಗೋಪಾಲಕೃಷ್ಣ, ವೆಂಕಟಾಚಲಪತಿ, ಬಸವರಾಜ್ ಕಾಂಬಳೆ, ಹರೀಶ್, ದ್ಯಾಮನಗೌಡ ಬಿರದಾರ್, ಮುನೇಂದ್ರ, ಗಜೇಂದ್ರ ಮತ್ತು ಬಿರೇಶ್ ಅವರ ಉತ್ತಮ ಕಾರ್ಯವನ್ನು ಎಸ್ಪಿ ಅವರು ಪ್ರಶಂಸಿಸಿ ಶ್ಲಾಘಿಸಿದ್ದಾರೆ.
Arakshakara Times Media
Related posts
