Share News

​ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕರಪತ್ರದಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದು, “ರಾಜ್ಯದಲ್ಲಿ ಗೋಹತ್ಯೆ ನಿಷೇಧಿತ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಕಾನೂನುಬದ್ಧವಾಗಿ ಅನುಮತಿ ಪಡೆದ ಮಾಂಸ ಸಾಗಣೆ ಮತ್ತು ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದು ತಿಳಿಸಿದ್ದಾರೆ.

​ಬಜರಂಗದಳ ಮಂಗಳೂರು ಮಹಾನಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರವೊಂದು ಹರಿದಾಡುತ್ತಿದ್ದು, “ತಲಪಾಡಿಯಿಂದ ಜೋಗಟ್ಟಿಗೆ ಸಾಗಿಸುತ್ತಿದ್ದ ಅಕ್ರಮ ಗೋಸಾಗಾಟ ವಾಹನದ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷಿಸಿ, ಯಾವುದೇ ಪ್ರಕರಣ ದಾಖಲಿಸದೆ ಕಸಾಯಿಖಾನೆಗೆ ತಲುಪಲು ಬಿಟ್ಟಿದ್ದಾರೆ” ಎಂದು ಆರೋಪಿಸಲಾಗಿತ್ತು.

​ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸ್ ಕಮಿಷನರ್, ಜಾನುವಾರುಗಳ ಅಕ್ರಮ ಸಾಗಣೆ ಅಥವಾ ಗೋಹತ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿದರೆ ತಕ್ಷಣ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

​ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, “ಕೇರಳದಿಂದ ನಿಯಮಾನುಸಾರ ಖರೀದಿಸಿದ ಮಾಂಸವನ್ನು ಮಂಗಳೂರಿನಲ್ಲಿ ಪರವಾನಗಿ (ಲೈಸೆನ್ಸ್) ಹೊಂದಿರುವ ಅಂಗಡಿಗೆ ತರಲಾಗುತ್ತಿತ್ತು. ಕರ್ನಾಟಕದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಿದ್ದರೂ, ನಿಯಮಗಳ ಅನ್ವಯ ಕಾನೂನುಬದ್ಧವಾಗಿ ಮಾಂಸ ಸಾಗಣೆ ಹಾಗೂ ಮಾರಾಟ ಮಾಡಲು ಅವಕಾಶವಿದೆ” ಎಂದು ವಿವರಿಸಿದರು.

​ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು:

ಅಲ್ಲದೆ, ಕಾನೂನುಬದ್ಧವಾಗಿ ನಡೆಯುವ ಸಾಗಾಟ ಹಾಗೂ ವ್ಯಾಪಾರವನ್ನು ಬಲವಂತವಾಗಿ ತಡೆಯಲು ಯತ್ನಿಸುವುದು, ವಾಹನಗಳನ್ನು ಅಡ್ಡಗಟ್ಟುವುದು, ಸವಾರರ ಮೇಲೆ ಹಲ್ಲೆ ನಡೆಸುವುದು ಅಥವಾ ಬೆದರಿಕೆ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಪ್ರಕರಣ ದಾಖಲಿಸಿ, 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.

​ಬೆಳಿಗ್ಗೆ ವಾಹನವೊಂದನ್ನು ತಡೆಯಲು ಯತ್ನಿಸಿರುವ ಕುರಿತು ದೂರು ಬಂದಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ತಿಳಿದುಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ಮಾಂಸ ಮಾರಾಟ ಅಥವಾ ಸಾಗಣೆಯನ್ನು ಸಂಪೂರ್ಣವಾಗಿ ತಡೆಯಲು ಬಯಸಿದರೆ, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ತಿದ್ದುಪಡಿ ತರಲಿ, ಆಗ ನಾವೇ ಅದನ್ನು ತಡೆಯುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ.


Share News