ಅಂಕೋಲಾ: ತಾಲೂಕಿನ ರಾಮನಗುಳಿ ಅರಣ್ಯ ವಲಯ ವ್ಯಾಪ್ತಿಯ ಕಲ್ಲೇಶ್ವರ ಗ್ರಾಮದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಅಡಕೆ ತೋಟದಲ್ಲಿ ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ವೇಳೆ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಅಕ್ಟೋಬರ್ 16ರಂದು ರಾತ್ರಿ ರಾಮನಗುಳಿ ಅರಣ್ಯ ವಲಯದ ಕಲ್ಲೇಶ್ವರ ಗ್ರಾಮದ ಅಡಕೆ ತೋಟವೊಂದರಲ್ಲಿ ವನ್ಯಜೀವಿ ಕಡವೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಚೀಲಗಳಲ್ಲಿ ತುಂಬಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಆರೋಪಿಗಳ ವಿವರ:
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅಂಕೋಲಾದ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನುಳಿದ ಪ್ರಮುಖ ಆರೋಪಿಗಳಾದ ಗಣೇಶ ರಾಮು ರಾಠೋಡ (27), ಲಕ್ಷ್ಮಣ ಬಾಬು ಸಿದ್ದಿ (55), ಲೋಕೇಶ ನಾರಾಯಣ ಸಿದ್ದಿ (50), ಶಿವರಾಜ ಲಕ್ಷ್ಮಣ ಸಿದ್ದಿ (30) ಹಾಗೂ ರಾಜು ಕೃಷ್ಣಾ ಸಿದ್ದಿ (45) ಎಂಬುವವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
Arakshakara Times Media
Related posts
