Share News

ಗಿಣಿಶಾಸ್ತ್ರದ ಹೆಸರಲ್ಲಿ ಐಟಿ ಅಧಿಕಾರಿಯೊಬ್ಬರಿಗೆ ಭವಿಷ್ಯ ಹೇಳುವುದಾಗಿ ನಂಬಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಂಚಿಸಿದ್ದ ಹೊರರಾಜ್ಯದ ವ್ಯಕ್ತಿಯನ್ನು ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 20.60 ಲಕ್ಷ ಮೌಲ್ಯದ 124 ಗ್ರಾಂ ಚಿನ್ನ ಹಾಗೂ 796 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನ ಚೆಟ್ಟಿಗಾರ್ಡನ್ ನಿವಾಸಿಯಾದ ಐಟಿ ಅಧಿಕಾರಿಯು ದೂರು ದಾಖಲಿಸಿದ್ದರು. ದೂರಿನ ಅನ್ವಯ, ಸಂತ್ರಸ್ತರು ಶ್ರೀ ಸರ್ಕಲ್ ಬಳಿ ಹೋಗುತ್ತಿದ್ದಾಗ ಆರೋಪಿಯು ಅವರನ್ನು ಕರೆದು ಮುಖ ನೋಡಿ ಭವಿಷ್ಯ ಹೇಳುವುದಾಗಿ ನಂಬಿಸಿದ್ದಾನೆ. ಮೊದಲಿಗೆ ಪೂಜೆಗಾಗಿ 50,000 ಪಡೆದಿದ್ದ ಆರೋಪಿಯು, ನಂತರ ವೃತ್ತಿಯಲ್ಲಿ ಮುಂಬಡ್ತಿ ಹಾಗೂ ಜೀವನ ಸುಧಾರಣೆಗಾಗಿ ಅದ್ದೂರಿ ಪೂಜೆ ಮಾಡಬೇಕೆಂದು ಹೆದರಿಸಿದ್ದಾನೆ. ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿ ಸಂತ್ರಸ್ತರಿಂದ 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯ ವಸ್ತುಗಳನ್ನು ಪಡೆದುಕೊಂಡಿದ್ದನು. ಇದನ್ನು ವಾಪಸ್ ಕೇಳಿದಾಗ ಆರೋಪಿಯು ಜೀವ ಬೆದರಿಕೆ ಹಾಕಿದ್ದರಿಂದ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಆರೋಪಿಯು ಹಲಸೂರಿನ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಆಭರಣಗಳನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಮಾಹಿತಿಯ ಮೇರೆಗೆ ಪೊಲೀಸರು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಆಮಟೆ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಶ್ರೀಮತಿ. ಗೀತಾ ಸಿ.ಆರ್ ನೇತೃತ್ವದಲ್ಲಿ ಭಾರತಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಫಿರೋಜ್ ಮಹಮ್ಮದ್ ಅವರ ನಾಯಕತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News