ಬೈಲಹೊಂಗಲ: ಕುಡುಕ ಪತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ತವರು ಮನೆ ಸೇರಿದ್ದ ಪತ್ನಿಯನ್ನೇ ಪತಿ ಕ್ರೂರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ. ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಮಹಿಳೆಯನ್ನು ಶಿವಕ್ಕ ಬಸವರಾಜ ಜೋಡಳಿ (33) ಎಂದು ಗುರುತಿಸಲಾಗಿದೆ. ಆರೋಪಿ ಬಸವರಾಜ ಈಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಗೆ ಸೌಮ್ಯ, ಪ್ರವೀಣ ಹಾಗೂ ಪ್ರಭು ಎಂಬ ಮೂವರು ಮಕ್ಕಳಿದ್ದಾರೆ. ಆರಂಭದಲ್ಲಿ ಸುಗಮವಾಗಿದ್ದ ಸಂಸಾರದಲ್ಲಿ ಕಳೆದ ಆರು ವರ್ಷಗಳಿಂದ ಬಿರುಗಾಳಿ ಎದ್ದಿತ್ತು. ಮದ್ಯಪಾನಕ್ಕೆ ದಾಸನಾಗಿದ್ದ ಬಸವರಾಜ, ಪತ್ನಿಯ ಮೇಲೆ ಅನಗತ್ಯ ಸಂಶಯಪಟ್ಟು ದಿನನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಪತಿಯ ಕಿರುಕುಳದಿಂದ ಬೇಸತ್ತ ಶಿವಕ್ಕ, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಗೋವನಕೊಪ್ಪದ ತವರು ಮನೆಗೆ ಬಂದು ವಾಸವಿದ್ದರು. ಮಗಳು ಸೌಮ್ಯ ಬೆಂಗಳೂರಿನಲ್ಲಿ ತಂದೆಯೊಂದಿಗಿದ್ದಳು. ಆದರೆ, ಆರೋಪಿ ಆಗಾಗ್ಗೆ ಊರಿಗೆ ಬಂದು ಪತ್ನಿಯೊಂದಿಗೆ ಜಗಳ ತೆಗೆದು ಜೀವ ಬೆದರಿಕೆ ಹಾಕುತ್ತಿದ್ದನು. ಈ ಸಂಬಂಧ ಈಗಾಗಲೇ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಶನಿವಾರ ಸಂಜೆ ಮನೆಗೆ ನುಗ್ಗಿದ ಆರೋಪಿ ಬಸವರಾಜ, ಶಿವಕ್ಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. “ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಕಿರುಚಾಡುತ್ತಾ ಆಕೆಯ ಕೂದಲು ಹಿಡಿದು ರಸ್ತೆಗೆ ಎಳೆತಂದಿದ್ದಾನೆ. ಅಮಾನವೀಯವಾಗಿ ಹಲ್ಲೆ ನಡೆಸಿದ ಆರೋಪಿ, ನಂತರ ಅಲ್ಲೇ ಇದ್ದ ದೊಡ್ಡ ಕಲ್ಲಿನಿಂದ ಶಿವಕ್ಕ ಅವರ ತಲೆ ಹಾಗೂ ಕಾಲಿನ ಮೇಲೆ ಜಜ್ಜಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ಮೃತಳ ತಂದೆಯ ಮೇಲೂ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಿದ್ದನು.
ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ದೊಡವಾಡ ಪೊಲೀಸರು ತನಿಖೆ ಚುರುಕುಗೊಳಿಸಿ, ಕೇವಲ 24 ಗಂಟೆಯೊಳಗೆ ಆರೋಪಿ ಬಸವರಾಜನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರೀತಿಸಿ ಮದುವೆಯಾದ ಪತಿಯೇ ಮಕ್ಕಳ ತಾಯಿಯನ್ನು ಬಲಿಪಡೆದ ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಶೋಕ ಹಾಗೂ ಆಕ್ರೋಶ ಮೂಡಿಸಿದೆ.