ಮಂಡ್ಯ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ಲೈನ್‌ಮ್ಯಾನ್ ಒಬ್ಬರು ಕಂಬದ ಮೇಲೆಯೇ ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಲ್ಲಿಗೆರೆ ಗ್ರಾಮದ ನಿವಾಸಿ ವಿಶ್ವ (55) ಎಂದು ಗುರುತಿಸಲಾಗಿದೆ. ಇವರು ವಿದ್ಯುತ್ ಗುತ್ತಿಗೆದಾರರೊಬ್ಬರ ಬಳಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಹೆಬ್ಬಾಡಿ ಗ್ರಾಮದಲ್ಲಿ ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾಗ, ಅನಿರೀಕ್ಷಿತವಾಗಿ ವಿದ್ಯುತ್ ಪ್ರವಹಿಸಿದೆ. ತೀವ್ರತರದ ಆಘಾತದಿಂದಾಗಿ ವಿಶ್ವ ಅವರು ಕಂಬದ ಮೇಲೆಯೇ ಕೊನೆಯುಸಿರೆಳೆದಿದ್ದಾರೆ.
ವಿದ್ಯುತ್ ಶಾಕ್ ತಗುಲಿದ ರಭಸಕ್ಕೆ ವಿಶ್ವ ಅವರ ಮೃತದೇಹ ಕಂಬದ ಮೇಲೆಯೇ ನೇತಾಡುತ್ತಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾದರು. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಸೆಸ್ಕ್ (CESC) ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮೃತದೇಹವನ್ನು ಕೆಳಗಿಳಿಸುವ ವ್ಯವಸ್ಥೆ ಮಾಡಿದರು.
ಘಟನಾ ಸ್ಥಳಕ್ಕೆ ಅರಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸುರಕ್ಷತಾ ಕ್ರಮಗಳ ಲೋಪದೋಷಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದ ಮಲ್ಲಿಗೆರೆ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.