Share News

ಬೆಂಗಳೂರು: ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜ್ವರ ಏರಿದ್ದರೆ, ಇತ್ತ ಅಭಿಮಾನಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ತಂಡವೊಂದು ಕೈಚಳಕ ತೋರಿಸಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯದ ವೇಳೆ ಮೊಬೈಲ್ ಕಳ್ಳತನ ಮಾಡಿದ್ದ ಅಂತರರಾಜ್ಯ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಶನಿವಾರ (ಮಾರ್ಚ್ 28) ನಡೆದ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಧಾವಿಸಿದ್ದರು. ಈ ಜನಜಂಗುಳಿಯನ್ನೇ ಗುರಿಯಾಗಿಸಿಕೊಂಡ ಕಳ್ಳರು, ಅಭಿಮಾನಿಗಳು ಪಂದ್ಯದ ಗುಂಗಿನಲ್ಲಿದ್ದಾಗ ಸಾಲು ಸಾಲಾಗಿ ಮೊಬೈಲ್‌ಗಳನ್ನು ಎಗರಿಸಿದ್ದರು. ಪಂದ್ಯ ಮುಗಿದು ಹೊರಬಂದಾಗ ಫೋನ್ ಕಾಣದಿದ್ದಾಗ ಆತಂಕಗೊಂಡ ಅಭಿಮಾನಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇವಲ 48 ಗಂಟೆಗಳ ಒಳಗಾಗಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ಓರ್ವ ಪ್ರಮುಖ ಆರೋಪಿ ಹಾಗೂ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 18 ಲಕ್ಷ ರೂಪಾಯಿ ಮೌಲ್ಯದ 28 ದುಬಾರಿ ಮೊಬೈಲ್‌ಗಳನ್ನು (ಐಫೋನ್ ಸೇರಿದಂತೆ) ವಶಪಡಿಸಿಕೊಳ್ಳಲಾಗಿದೆ.

ತನಿಖೆಯ ವೇಳೆ ಕಳ್ಳರ ತಂಡದ ಆಘಾತಕಾರಿ ಸತ್ಯಾಂಶಗಳು ಹೊರಬಂದಿವೆ. ಈ ಗ್ಯಾಂಗ್ ಪೊಲೀಸರಿಗೆ ಅನುಮಾನ ಬರದಂತೆ ತಡೆಯಲು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಜನಜಂಗುಳಿ ಇರುವ ಕಡೆಗಳಲ್ಲಿ ಕಳ್ಳತನ ಮಾಡಿಸುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಸದ್ಯ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಅಂತರರಾಜ್ಯ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


Share News