ಬೆಂಗಳೂರು: ರಾಜ್ಯದಲ್ಲಿ ಗೃಹರಕ್ಷಕ ದಳ (ಹೋಮ್ಗಾರ್ಡ್ಸ್) ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ನಿಯಮಬಾಹಿರವಾಗಿ ವಾಹನ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಪತ್ರ ಬರೆದಿದೆ.
ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಪತ್ರ ಬರೆದಿದ್ದು, ಅನಧಿಕೃತ ವಾಹನ ತಪಾಸಣೆ ಹಾಗೂ ಸಾರ್ವಜನಿಕರ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆ-1988ರ ಪ್ರಕಾರ, ವಾಹನ ತಪಾಸಣೆ ನಡೆಸಲು ಮತ್ತು ದಂಡ ವಿಧಿಸಲು ಸಹಾಯಕ ಪೊಲೀಸ್ ಉಪ ನಿರೀಕ್ಷಕ (ASI) ಹಾಗೂ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳು ಕೇವಲ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಎಫ್.ಟಿ.ವಿ.ಆರ್ (FTVR) ವರದಿಯನ್ವಯ ಚಲನ್ ನೀಡಲು ಮಾತ್ರ ಅವಕಾಶವಿದೆ.
ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಮತ್ತು ಗಸ್ತು ವಾಹನಗಳ ಚಾಲಕರಾಗಿರುವ ಸಶಸ್ತ್ರ ಪಡೆಯ ಸಿಬ್ಬಂದಿಗಳು ತಾವೇ ಸ್ವತಃ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಸಾರ್ವಜನಿಕರ ವಾಹನಗಳ ಕೀ ಕಿತ್ತುಕೊಳ್ಳುವುದು.
ಬೆದರಿಸಿ, ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು.
ಹೆದ್ದಾರಿಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಅನಧಿಕೃತವಾಗಿ ಹಣ ವಸೂಲಿ ಮಾಡುವುದು.
ಈ ರೀತಿಯ ಹಣ ವಸೂಲಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಲಾಖೆಗೆ ಮುಜುಗರ ತಂದಿವೆ.
ನೊಂದ ಸಾರ್ವಜನಿಕರು ಪ್ರಾಧಿಕಾರಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಕ್ರಮಗಳಿಗೆ ಪತ್ರದಲ್ಲಿ ಒತ್ತಾಯಿಸಲಾಗಿದೆ:
ಕಟ್ಟುನಿಟ್ಟಿನ ಸುತ್ತೋಲೆ: ಅಧಿಕಾರವಿಲ್ಲದ ಸಿಬ್ಬಂದಿಗಳು ಯಾವುದೇ ವಾಹನಗಳನ್ನು ತಡೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ರೋಲ್ ಕಾಲ್ ವೇಳೆ ಎಚ್ಚರಿಕೆ: ಪ್ರತಿದಿನ ಪೊಲೀಸ್ ಠಾಣೆಗಳಲ್ಲಿ ನಡೆಯುವ ರೋಲ್ ಕಾಲ್ ಸಮಯದಲ್ಲಿ ಸಿಬ್ಬಂದಿಗಳಿಗೆ ಈ ನಿಯಮಗಳ ಬಗ್ಗೆ ಕಡ್ಡಾಯವಾಗಿ ಎಚ್ಚರಿಕೆ ನೀಡಬೇಕು.
ಸಾರ್ವಜನಿಕ ಸ್ನೇಹಿ ಆಡಳಿತ: ಇಲಾಖೆಯ ಸಿಬ್ಬಂದಿಗಳ ದುರ್ನಡತೆಯಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.
ಈ ಆದೇಶ ಜಾರಿಗೆ ಬಂದರೆ, ರಸ್ತೆಯಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ಕಿರುಕುಳ ನೀಡುವ ಪ್ರವೃತ್ತಿಗೆ ಬ್ರೇಕ್ ಬೀಳುವ ನಿರೀಕ್ಷೆಯಿದೆ.