ಕನಕಪುರ: ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೈಸೂರು ಮೂಲದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಕನಕಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವರ್ಷ ಕನಕಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಗೌಡ ಬೀದಿ ಹಾಗೂ ಬಸವೇಶ್ವರನಗರ ಬಡಾವಣೆಗಳಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ನಡೆದಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.
ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮೈಸೂರು ಮೂಲದ ಅಸ್ಲಂ (40) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು ₹1.80 ಲಕ್ಷ ಮೌಲ್ಯದ 12 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಬಂಧಿತ ಅಸ್ಲಂ ಕೇವಲ ಕನಕಪುರ ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 19 ಪೊಲೀಸ್ ಠಾಣೆಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಳೆಯ ಕ್ರಿಮಿನಲ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಕೈಚಳಕ ತೋರುವುದು ಈತನ ಮಸಲತ್ತಾಗಿತ್ತು.
ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ, ಕನಕಪುರ ನಗರ ಠಾಣೆಯ ಇನ್ಸ್ಪೆಕ್ಟರ್ ಕೆ.ಎ. ಅನಂತರಾಂ, ಪಿಎಸ್ಐ ರತ್ನಮ್ಮ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಕುಖ್ಯಾತ ಕಳ್ಳನನ್ನು ಸೆರೆಹಿಡಿದ ತಂಡದ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ :- ಗಿಲ್ಬರ್ಟ್. ಜೆ