ಭಟ್ಕಳ: ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ಬಳಸಿ ನ್ಯಾಯಾಲಯಕ್ಕೆ ವಂಚಿಸಿ, ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ವ್ಯಕ್ತಿಯನ್ನು ಭಟ್ಕಳ ನಗರ ಪೊಲೀಸರು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 30-06-2025 ರಂದು ಭಟ್ಕಳದ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಅಪರಾಧ ಸಂಖ್ಯೆ 56/2025 ರ ಆರೋಪಿಗಳಿಗೆ ಜಾಮೀನು ನೀಡಲು ಕೆಲವರು ಬಂದಿದ್ದರು. ಅವರು ಹಾಜರುಪಡಿಸಿದ ಆಧಾರ್ ಕಾರ್ಡ್ ಹಾಗೂ ಪಹಣಿ (RTC) ಪತ್ರಗಳನ್ನು ನ್ಯಾಯಾಲಯದ ‘ಶೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಮೂಲಕ ಪರಿಶೀಲಿಸಿದಾಗ, ಅವು ನಕಲಿ ಎಂಬುದು ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ವಂಚಿಸುವ ಉದ್ದೇಶದಿಂದ ಈ ನಕಲಿ ದಾಖಲೆಗಳನ್ನು ನೀಡಲಾಗಿತ್ತು. ದಾಖಲೆಗಳ ತಪಾಸಣೆ ನಡೆಯುತ್ತಿದ್ದಂತೆಯೇ ಆರೋಪಿಗಳು ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದರು.
ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಗುನ್ನಾ ನಂ: 76/2025, ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 229, 318(4), 336(3) ಹಾಗೂ 3(5) ರ ಅಡಿಯಲ್ಲಿ).
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಮಹೇಶ ತಂದೆ ಬಿ. ಮೋಹನ ನಾಯಕ (ನಿವಾಸಿ: ಮರೋಳಿ, ಮಂಗಳೂರು) ಈತನನ್ನು ದಿನಾಂಕ 15-04-2026 ರಂದು ಮಂಗಳೂರಿನಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ. ದಸ್ತಗಿರಿ ನಿಯಮಗಳನ್ನು ಪಾಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಈ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು:
ದಿವಾಕರ ಪಿ.ಎಂ. (ಪಿ.ಐ, ಭಟ್ಕಳ ಶಹರ ಠಾಣೆ) – ನೇತೃತ್ವ
ನವೀನ್ ಎಸ್. ನಾಯ್ಕ (ಪಿ.ಎಸ್.ಐ)
ದಿನೇಶ ನಾಯಕ (ಸಿ.ಎಚ್.ಸಿ-1475)
ಮಹಾಂತೇಶ ಹಿರೇಮಠ (ಸಿ.ಪಿ.ಸಿ-1346)
ಚಾಣಾಕ್ಷತನದಿಂದ ಆರೋಪಿಯನ್ನು ಪತ್ತೆಹಚ್ಚಿದ ಭಟ್ಕಳ ಶಹರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಇಲಾಖೆಯ ವತಿಯಿಂದ ಅಭಿನಂದಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.