ಗಾಂಧಿನಗರದ ಅಂಗಡಿ ಮೇಲೆ ಉಪ್ಪಾರಪೇಟೆ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ನಿಷೇಧಿತ ವಿದೇಶಿ ಸಿಗರೇಟ್ಗಳ ಜಪ್ತಿ, ಇಬ್ಬರು ಆರೋಪಿಗಳ ಬಂಧನ: ದೆಹಲಿ ಮೂಲದ ವ್ಯಕ್ತಿಗಾಗಿ ತಲಾಷ್
ನಗರದ ಮಧ್ಯಭಾಗ ಗಾಂಧಿನಗರದ ತ್ರಿಭುವನ್ ಬಿಲ್ಡಿಂಗ್ನಲ್ಲಿರುವ ಅಂಗಡಿ ಮತ್ತು ಗೋಡೌನ್ ಮೇಲೆ ಉಪ್ಪಾರಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟಿದ್ದ ವಿವಿಧ ಕಂಪನಿಗಳ ವಿದೇಶಿ ಸಿಗರೇಟ್ಗಳನ್ನು ಪತ್ತೆಹಚ್ಚಲಾಗಿದೆ.
ಒಟ್ಟು 35,00,000 ರೂ. ಮೌಲ್ಯದ 1026 ಬಂಡಲ್ ವಿದೇಶಿ ಸಿಗರೇಟ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಇಬ್ಬರು ವ್ಯಕ್ತಿಗಳು ದೆಹಲಿ ಮೂಲದ ವ್ಯಕ್ತಿಯಿಂದ ಈ ಸಿಗರೇಟ್ಗಳನ್ನು ತರಿಸಿಕೊಂಡು ಹೆಚ್ಚಿನ ಲಾಭಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದ್ದು, ಸಿಗರೇಟ್ ಸರಬರಾಜು ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಯತೀಶ್ ಎನ್ ಮತ್ತು ಚಿಕ್ಕಪೇಟೆ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರಮೇಶ್ ಕೆ ಎಂ ಅವರ ಮಾರ್ಗದರ್ಶನದಲ್ಲಿ ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶ್ರೀ. ಟಿ ಡಿ ಸತೀಶ್ ಕುಮಾರ್ ಮತ್ತು ತಂಡದವರು ನಿರ್ವಹಿಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್