Share News

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ ಮಿತಿಮೀರಿದ್ದು, ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಯುವತಿಯರು ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬೈಕ್‌ಗಳಲ್ಲಿ ಬರುವ ಪುಂಡರು ಯುವತಿಯರ ಅಂಗಾಂಗಗಳನ್ನು ಮುಟ್ಟಿ ಪರಾರಿಯಾಗುತ್ತಿರುವ ಆತಂಕಕಾರಿ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ನಗರದ ದೇಶಪಾಂಡೆ ನಗರದಲ್ಲಿ ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಗಮನಿಸಿದ ಬೈಕ್ ಸವಾರರು, ಆಕೆಯ ಹಿಂಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿ ವೇಗವಾಗಿ ಪರಾರಿಯಾಗಿದ್ದಾರೆ. ಒಂದೇ ಬೈಕ್‌ನಲ್ಲಿ ಬಂದಿದ್ದ ಮೂವರು ಯುವಕರು ಈ ಹೀನ ಕೃತ್ಯ ಎಸಗಿದ್ದು, ಇಡೀ ಘಟನೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಕೇವಲ ಇದೊಂದೇ ಘಟನೆಯಲ್ಲದೆ, ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ‘ರೋಡ್ ರೋಮಿಯೋ’ಗಳ ಕಾಟ ಹೆಚ್ಚಾಗಿದೆ. ಈ ಹಿಂದೆ ಯುವತಿಯರಿಗೆ ‘ಫ್ಲೈಯಿಂಗ್ ಕಿಸ್’ ನೀಡಿ ವಿಕೃತಿ ಮೆರೆದಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಹಾಡಹಗಲೇ ಯುವತಿಯರ ದೇಹ ಮುಟ್ಟಿ ಪರಾರಿಯಾಗುವ ಹಂತಕ್ಕೆ ಪುಂಡರ ಧೈರ್ಯ ಬೆಳೆದಿರುವುದು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ.

ಈ ಘಟನೆಯು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಮತ್ತು ಘಟನೆ ನಡೆದು ಹಲವು ದಿನಗಳಾಗಿದ್ದರೂ, ಪೊಲೀಸರು ಮಾತ್ರ ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜನನಿಬಿಡ ಪ್ರದೇಶಗಳಲ್ಲಿ ಹಾಗೂ ಕಾಲೇಜು ರಸ್ತೆಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಮಹಿಳೆಯರು ಒಂಟಿಯಾಗಿ ಓಡಾಡಲು ಭಯಪಡುವಂತಾಗಿದೆ. ಕೂಡಲೇ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಬೇಕು ಮತ್ತು ನಗರದಾದ್ಯಂತ ಪೊಲೀಸ್ ಗಸ್ತನ್ನು ಚುರುಕುಗೊಳಿಸಿ ಪುಂಡರಿಗೆ ಬಿಸಿ ಮುಟ್ಟಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.


Share News