ಗುಂಡ್ಲುಪೇಟೆ: ತಾಲ್ಲೂಕಿನ ಹಿಂದೂಸ್ತಾನ್ ಕ್ವಾರಿಯಲ್ಲಿ ಟಿಪ್ಪರ್ ಚಾಲಕನೊಬ್ಬ ಸುಮಾರು 150 ಅಡಿ ಆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆದರೆ, ಈ ಘಟನೆಯನ್ನು ಕೇವಲ ಚಾಲಕನ ಅಜಾಗರೂಕತೆ ಎಂದು ಬಿಂಬಿಸಿ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ನಿಯಮ ಮೀರಿ ಕ್ವಾರಿ ಗಣಿಗಾರಿಕೆ?
ಸದರಿ ಕ್ವಾರಿಯನ್ನು ಸುಮಾರು 100 ರಿಂದ 150 ಅಡಿಗಳಷ್ಟು ಆಳಕ್ಕೆ ಕೊರೆಯಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳ ಪ್ರಕಾರ ಇಷ್ಟು ಆಳಕ್ಕೆ ಗಣಿಗಾರಿಕೆ ನಡೆಸಲು ಅನುಮತಿ ಇದೆಯೇ ಎಂಬ ಪ್ರಶ್ನೆ ಎದ್ದಿದೆ. ಕ್ವಾರಿಯಲ್ಲಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇಷ್ಟೊಂದು ಆಳಕ್ಕೆ ಗುಂಡಿ ತೆಗೆದಿದ್ದರೂ ಗಣಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ವಾರಿಯ ಮಾಲೀಕರು ಪ್ರಭಾವಿ ಜನಪ್ರತಿನಿಧಿಯೊಬ್ಬರ ಆಪ್ತರಾಗಿದ್ದು, ಈ ಕಾರಣದಿಂದಲೇ ಪೊಲೀಸ್ ದೂರು ಹಾಗೂ ತನಿಖೆಯನ್ನು ಹಾದಿ ತಪ್ಪಿಸಲು ಯತ್ನಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. “ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ” ಎಂಬ ನೆಪವೊಡ್ಡಿ ಕ್ವಾರಿ ಮಾಲೀಕರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ವಾರಿ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಬೇಕು. ನಿಗದಿಪಡಿಸಿದ ಮಿತಿಗಿಂತ ಎಷ್ಟು ಅಡಿ ಹೆಚ್ಚು ಆಳವಾಗಿ ಗಣಿಗಾರಿಕೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ, ಮೃತ ಚಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು.
”ಉಳ್ಳವರು ಏನೂ ಮಾಡಿದರೂ ನಡೆಯುತ್ತದೆ ಎಂಬ ವ್ಯವಸ್ಥೆ ಬದಲಾಗಬೇಕು. ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ನಡೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.