ಬೆಂಗಳೂರು: ಕಾರುಗಳ ಪ್ರಮುಖ ಆಕರ್ಷಣೆಯಾಗಿರುವ ‘ಸನ್‌ರೂಫ್’ (Sunroof) ಇತ್ತೀಚಿನ ದಿನಗಳಲ್ಲಿ ಮಕ್ಕಳ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆಯೇ? ಪೋಷಕರ ಅತಿಯಾದ ಮುದ್ದಾಟ ಮತ್ತು ಬೇಜವಾಬ್ದಾರಿತನಕ್ಕೆ ಪುಟ್ಟ ಮಕ್ಕಳ ಅಮೂಲ್ಯ ಜೀವಗಳು ರಸ್ತೆಯ ಮಧ್ಯೆ ಬಲಿಯಾಗಬೇಕೇ? ಇಂತಹದ್ದೊಂದು ಗಂಭೀರ ಪ್ರಶ್ನೆ ಹಾಗೂ ಆತಂಕ ಈಗ ಸಿಲಿಕಾನ್ ಸಿಟಿಯ ವಾಹನ ಸವಾರರಲ್ಲಿ ಮೂಡಿದೆ.
ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಹಾಗೂ ಫ್ಲೈಓವರ್‌ಗಳ ಮೇಲೆ ಐಷಾರಾಮಿ ಕಾರುಗಳ ಸನ್‌ರೂಫ್‌ನಿಂದ ಹೊರಗೆ ಬಂದು, ಗಾಳಿಯಲ್ಲಿ ಕೈಬೀಸುತ್ತಾ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು!
ಅನೇಕ ಪೋಷಕರು ತಮ್ಮ ಮಕ್ಕಳು ಹಠ ಮಾಡುತ್ತಾರೆಂಬ ಕಾರಣಕ್ಕೋ ಅಥವಾ ಫ್ಯಾಷನ್ ಎಂದೋ ಚಲಿಸುವ ಕಾರಿನ ಸನ್‌ರೂಫ್ ಓಪನ್ ಮಾಡಿ ಮಕ್ಕಳನ್ನು ಹೊರಗೆ ನಿಲ್ಲಿಸುತ್ತಾರೆ. ಆದರೆ, ಬಿಡುವಿಲ್ಲದ ಬೆಂಗಳೂರಿನ ಟ್ರಾಫಿಕ್ ಹಾಗೂ ವೇಗವಾಗಿ ಚಲಿಸುವ ರಸ್ತೆಗಳಲ್ಲಿ ಇದು ನೇರವಾಗಿ ಸಾವಿಗೆ ಆಹ್ವಾನ ನೀಡಿದಂತೆ ಎಂಬ ಕನಿಷ್ಠ ಜ್ಞಾನವೂ ಪೋಷಕರಿಗಿಲ್ಲದಿರುವುದು ದುರಂತ.
ಕಾರು ಚಲಿಸುವಾಗ ಏಕಾಏಕಿ ಬ್ರೇಕ್ ಹಾಕಿದರೆ ಅಥವಾ ಹಿಂದಿನಿಂದ ಯಾವುದೇ ವಾಹನ ಬಂದು ಡಿಕ್ಕಿ ಹೊಡೆದರೆ, ಸನ್‌ರೂಫ್‌ನಲ್ಲಿ ನಿಂತಿರುವ ಮಗು ಕಾರಿನಿಂದ ಹೊರಗೆ ಹಾರಿ ರಸ್ತೆಗೆ ಬೀಳುವ ಅಥವಾ ತಲೆ ಮತ್ತು ಕುತ್ತಿಗೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಳ್ಳುವ ಭೀಕರ ಅಪಾಯವಿರುತ್ತದೆ.
ಸನ್‌ರೂಫ್ ಇರುವುದು ಕಾರಿನ ಒಳಗಿನ ಗಾಳಿ ಮತ್ತು ಬೆಳಕಿನ ಸಂಚಾರಕ್ಕಾಗಿಯೇ ಹೊರತು, ಮಕ್ಕಳನ್ನು ಹೊರಗೆ ನಿಲ್ಲಿಸಿ ಪ್ರದರ್ಶನ ಮಾಡುವುದಕ್ಕಲ್ಲ ಎಂದು ಸಾರಿಗೆ ತಜ್ಞರು ಎಚ್ಚರಿಸುತ್ತಿದ್ದಾರೆ. ಇಂತಹ ಅಪಾಯಕಾರಿ ಪ್ರಯಾಣದ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು (Traffic Police) ಕಠಿಣ ಕ್ರಮ ಕೈಗೊಳ್ಳಬೇಕು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ಇಂತಹ ಕಾರುಗಳನ್ನು ಪತ್ತೆಹಚ್ಚಿ ಪೋಷಕರಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪೋಷಕರೇ ನೆನಪಿಡಿ, ಮಕ್ಕಳ ಮೇಲಿನ ಅತಿಯಾದ ಮುದ್ದಾಟ ಕ್ಷಣಾರ್ಧದಲ್ಲಿ ಹೆತ್ತ ಕರುಳಿಗೆ ಎಂದಿಗೂ ಮರೆಯದ ಜೀವನಪರ್ಯಂತ ಕಣ್ಣೀರನ್ನು ತಂದಿಡಬಹುದು. ಚಲಿಸುವ ವಾಹನಗಳಲ್ಲಿ ಸನ್‌ರೂಫ್ ಕ್ರೇಜ್‌ಗೆ ಬ್ರೇಕ್ ಹಾಕಿ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ.