Share News

ಕೊಪ್ಪಳ: ಹನುಮ ಜನ್ಮಸ್ಥಳ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ₹2.50 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೆ ಈಗ ಭಾರಿ ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾಡಳಿತ ನಡೆಸಿದ ತಾಂತ್ರಿಕ ಪರಿಶೀಲನೆಯಲ್ಲಿ ಆ ಆಭರಣಗಳು ಸಂಪೂರ್ಣ ಚಿನ್ನದ್ದಲ್ಲ, ಬದಲಾಗಿ ಚಿನ್ನ ಲೇಪಿತ (Gold Plated) ತಾಮ್ರದ ಆಭರಣಗಳೆಂದು ಸಾಬೀತಾಗಿದೆ.

ಕಳೆದ ಮೇ 8ರಂದು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬುವವರು ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಸಮ್ಮುಖದಲ್ಲಿ ಅಂಜನಾದ್ರಿ ದೇವಸ್ಥಾನಕ್ಕೆ ಭವ್ಯವಾದ ಪ್ರಭಾವಳಿ, ಚಕ್ರ ಹಾಗೂ ಗದೆಯನ್ನು ದೇಣಿಗೆಯಾಗಿ ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು ₹2.50 ಕೋಟಿ ಎಂದು ಬಿಂಬಿಸಲಾಗಿತ್ತು.

ದೇವಸ್ಥಾನದ ಆಸ್ತಿಯಾಗಿ ನೋಂದಾಯಿಸುವ ಮುನ್ನ ಸಹಾಯಕ ಆಯುಕ್ತ (AC) ಮಹೇಶ್ ಮಾಲಗಿತ್ತಿ ನೇತೃತ್ವದಲ್ಲಿ ಆಭರಣಗಳ ನಿಖರತೆ ಪರಿಶೀಲಿಸಲಾಯಿತು. ಈ ವೇಳೆ ಆಭರಣಗಳಲ್ಲಿ ಕೇವಲ 28 ಗ್ರಾಂ ಮಾತ್ರ ಚಿನ್ನವಿರುವುದು ಪತ್ತೆಯಾಗಿದೆ. ಉಳಿದಂತೆ ಇಡೀ ಆಭರಣಗಳನ್ನು ತಾಮ್ರದಿಂದ ತಯಾರಿಸಿ ಅದರ ಮೇಲೆ ಚಿನ್ನದ ಲೇಪನ ಮಾಡಲಾಗಿರುವುದು ದೃಢಪಟ್ಟಿದೆ.

ದೇವಸ್ಥಾನಕ್ಕೆ ನೀಡಿದ ಆಭರಣಗಳ ನಿಖರ ಮೌಲ್ಯದ ಬಿಲ್ ಹಾಗೂ ಅದರ ಖಚಿತತೆಯ ಬಗ್ಗೆ ಅಧಿಕೃತ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಡಳಿತವು ಉದ್ಯಮಿ ಮಹೇಶ್ ರೆಡ್ಡಿಗೆ ನೋಟಿಸ್ ನೀಡಿದೆ. ಸರಿಯಾದ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಈ ಆಭರಣಗಳನ್ನು ಖಜಾನೆಗೆ ಜಮೆ ಮಾಡದೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ದೇಣಿಗೆ ನೀಡಿದ ಆರಂಭದ ಎರಡು ದಿನಗಳ ಕಾಲ ಮಹೇಶ್ ರೆಡ್ಡಿ ಅವರ ಮನವಿಯ ಮೇರೆಗೆ ಈ ಆಭರಣಗಳನ್ನು ಸ್ವಾಮಿಯ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ ಈಗ ಸತ್ಯಾಂಶ ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಕೋಟಿ ಬೆಲೆಯ ಚಿನ್ನ ಎಂದು ಹೇಳಿ ತಾಮ್ರದ ಆಭರಣಗಳನ್ನು ನೀಡಿದ ಉದ್ದೇಶದ ಬಗ್ಗೆ ಭಕ್ತರಲ್ಲಿ ಅನುಮಾನಗಳು ಮೂಡಿವೆ.


Share News