Share News

ಶ್ರೀರಂಗಪಟ್ಟಣ: ಮಗು ಅಪಹರಣವಾಗಿದೆ ಎಂದು ಭ್ರಮಿಸಿ ಪೋಷಕರು ನೀಡಿದ ದೂರಿನ ಮೇರೆಗೆ ಜಾಲಾಡಿದ ಪೊಲೀಸರಿಗೆ, ಮಗು ಮನೆಯ ಸೋಫಾ ಕೆಳಗೇ ಗಾಢ ನಿದ್ರೆಯಲ್ಲಿ ಪತ್ತೆಯಾದ ವಿಲಕ್ಷಣ ಘಟನೆ ಶ್ರೀರಂಗಪಟ್ಟಣದ ಗಂಜಾಮ್‌ನಲ್ಲಿ ನಡೆದಿದೆ. ಪೋಷಕರ ಎಡವಟ್ಟು ಒಂದೆಡೆ ಆತಂಕ ಸೃಷ್ಟಿಸಿದರೆ, ಮತ್ತೊಂದೆಡೆ ಪೊಲೀಸರನ್ನು ಹೈರಾಣಾಗಿಸಿದೆ.

ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಾಮ್ ನಿವಾಸಿಯಾದ 3 ವರ್ಷದ ಮಗು ಮನೆಯಲ್ಲಿ ಆಟವಾಡುತ್ತಾ ಕಾಣದಂತಾಗಿದೆ. ಪೋಷಕರು ಅಕ್ಕಪಕ್ಕ ಹಾಗೂ ಮನೆಯ ಹೊರಗೆಲ್ಲಾ ಹುಡುಕಾಡಿ ಸಿಗದಿದ್ದಾಗ, ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಗು ಕಿಡ್ನಾಪ್ ಆಗಿರುವ ಬಗ್ಗೆ ದೂರು ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಶ್ರೀರಂಗಪಟ್ಟಣ ಪೊಲೀಸರು ಮಗುವಿಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಲಾಡಿದ್ದಾರೆ. ಸಂಭವನೀಯ ಸ್ಥಳಗಳನ್ನೆಲ್ಲಾ ಪರಿಶೀಲಿಸಿ ಸುಸ್ತಾದ ಪೊಲೀಸರು, ಕೊನೆಯದಾಗಿ ಮನೆಯ ಒಳಭಾಗವನ್ನೇ ಸೂಕ್ಷ್ಮವಾಗಿ ತಪಾಸಣೆ ನಡೆಸಲು ನಿರ್ಧರಿಸಿದರು.

ಮನೆಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ, ಅಲ್ಲಿನ ಸೋಫಾ ಕೆಳಗಿನ ಸಣ್ಣ ಜಾಗದಲ್ಲಿ ಮಗು ಯಾರಿಗೂ ಕಾಣದಂತೆ ಮಲಗಿರುವುದು ಪತ್ತೆಯಾಗಿದೆ. ಆಟವಾಡುತ್ತಾ ಸುಸ್ತಾಗಿದ್ದ ಮಗು ಸೋಫಾ ಅಡಿ ಸೇರಿಕೊಂಡು ಗಾಢ ನಿದ್ರೆಗೆ ಜಾರಿತ್ತು. ಮಗು ಸುರಕ್ಷಿತವಾಗಿ ಪತ್ತೆಯಾಗುತ್ತಿದ್ದಂತೆಯೇ ಅಳುತಿದ್ದ ಪೋಷಕರು ನಿಟ್ಟುಸಿರು ಬಿಟ್ಟರೆ, ಅಲೆದಾಡಿ ಸುಸ್ತಾಗಿದ್ದ ಪೊಲೀಸರು ಪೋಷಕರ ಎಡವಟ್ಟಿಗೆ ಒಂದು ಕ್ಷಣ ಬೇಸ್ತು ಬಿದ್ದರು.

​ಮಗು ಪತ್ತೆಯಾದ ಬಳಿಕ ಪೊಲೀಸರು ಪೋಷಕರಿಗೆ ಬುದ್ಧಿವಾದ ಹೇಳಿ, ಇನ್ಮುಂದೆ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.


Share News