ಆನೇಕಲ್ (ಬೆಂಗಳೂರು): ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಮುಗಳೂರು ಕೆರೆ ಅಂಗಳದಲ್ಲಿ ಮನುಷ್ಯನ ತಲೆಬುರುಡೆ ಹಾಗೂ ಮೂಳೆಗಳು (ಅಸ್ಥಿಪಂಜರದ ಅವಶೇಷಗಳು) ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಹಾಗೂ ನಡುಕ ಮೂಡಿಸಿದೆ.
ಕೆರೆ ಅಂಗಳದಲ್ಲಿ ಬಿದ್ದಿದ್ದ ಅಸ್ಥಿಪಂಜರವನ್ನು ಮೊದಲು ಗಮನಿಸಿದ ಸ್ಥಳೀಯ ಕುರಿಗಾಹಿಗಳು ತಕ್ಷಣವೇ ಸರ್ಜಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಭೀಕರ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಎಸ್ಪಿ (ASP) ವೆಂಕಟೇಶ್ ಪ್ರಸನ್ನ ಹಾಗೂ ಡಿವೈಎಸ್ಪಿ (DySP) ಗೋಪಾಲ್ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಆಗಮಿಸಿದ ಸೋಕೋ (SOCO – Scene of Crime Officers) ಅಪರಾಧ ಸ್ಥಳ ತಜ್ಞರ ತಂಡವು ತಲೆಬುರುಡೆ ಹಾಗೂ ಮೂಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮುಂದಿನ ವೈಜ್ಞಾನಿಕ ತನಿಖೆಗಾಗಿ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕಿದೆ.
ಮಾನವ ಅವಶೇಷಗಳು ಸಿಕ್ಕಿರುವ ಜಾಗದಲ್ಲಿಯೇ ಮಹಿಳೆಯೊಬ್ಬರು ಧರಿಸುವ ಸೀರೆಯೊಂದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಕ್ಕಿರುವ ತಲೆಬುರುಡೆ ಮತ್ತು ಮೂಳೆಗಳು ಮಹಿಳೆಯೊಬ್ಬಳಿಗೆ ಸೇರಿರಬಹುದು ಹಾಗೂ ಆಕೆಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಇಲ್ಲಿ ತಂದು ಬಿಸಾಡಿರಬಹುದು ಎಂಬ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸದ್ಯ ಈ ನಿಗೂಢ ಘಟನೆಗೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಯಾರದ್ದು? ಸಾವು ಹೇಗೆ ಸಂಭವಿಸಿತು? ಎಂಬ ನಿಗೂಢತೆಯನ್ನು ಭೇದಿಸಲು ಪೊಲೀಸರು ಸುತ್ತಮುತ್ತಲಿನ ಠಾಣೆಗಳ ಕಾಣೆಯಾದವರ (Missing Cases) ದೂರುಗಳ ವಿವರವನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವರದಿ: ಗಿಲ್ಬರ್ಟ್ ಜೆ.