Share News

ಬೆಂಗಳೂರು: ಯುವಕನಿಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ ಹಳೇ ರೌಡಿಶೀಟರ್ ಒಬ್ಬ, ತನ್ನನ್ನು ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಮೂಳೆ ಮುರಿದುಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

​ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂಬಾತನೇ ಪೊಲೀಸರ ಹೆಡೆಮುರಿ ಕಟ್ಟುವ ಕಾರ್ಯಾಚರಣೆ ವೇಳೆ ಆಯತಪ್ಪಿ ಬಿದ್ದು ಆಸ್ಪತ್ರೆ ಪಾಲಾಗಿರುವ ರೌಡಿ.

ಇತ್ತೀಚೆಗೆ ಯುವಕನೋರ್ವನಿಗೆ ಚಾಕು ಇರಿದು ಜೀವಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ರೌಡಿ ಸ್ಪಾಟ್ ನಾಗ ಪೊಲೀಸರಿಗೆ ಬೇಕಾಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗಾಗಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಲೆ ಬೀಸಿದ್ದರು. ಇಂದು ಆತ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿರುವ ತನ್ನದೇ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರ ತಂಡ ಸ್ಥಳಕ್ಕೆ ತಲುಪುತ್ತಿದ್ದಂತೆ ಅಲರ್ಟ್ ಆದ ಸ್ಪಾಟ್ ನಾಗ, ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಬಂಧಿಸಲು ಮುಂದಾದ ಕರ್ತವ್ಯ ನಿರತ ಪೊಲೀಸರನ್ನು ತಳ್ಳಿ, ಅವರ ಮೇಲೆಯೇ ದಾಳಿ ನಡೆಸಲು ಯತ್ನಿಸಿ ಭೀತಿ ಮೂಡಿಸಿದ್ದಾನೆ. ಅಲ್ಲದೆ ಪೊಲೀಸರಿಗೆ ತೀವ್ರವಾಗಿ ಬೆದರಿಕೆ ಹಾಕುತ್ತಾ ಅಲ್ಲಿಂದ ಓಡಲು ಯತ್ನಿಸಿದ್ದಾನೆ.

ಪೊಲೀಸರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲೇಬೇಕು ಎಂದು ನಿರ್ಮಾಣ ಹಂತದ ಕಟ್ಟಡದ ಮೇಲ್ಭಾಗದಲ್ಲಿ ಓಡುತ್ತಿದ್ದಾಗ ನಾಗರಾಜ್ ಆಯತಪ್ಪಿ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ ಮೂಳೆ ಮುರಿತಕ್ಕೊಳಗಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಕಾರ್ಯಾಚರಣೆಯಲ್ಲಿದ್ದ ಪೊಲೀಸರು ಗಾಯಾಳು ರೌಡಿಯನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಆತನಿಗೆ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

​ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿದ್ದ ರೌಡಿ, ಇದೀಗ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೂ ಗುರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಹೊಸ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 


Share News