ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸುಪ್ರೀಂ ಕೋರ್ಟ್ (ಸರ್ವೋಚ್ಚ ನ್ಯಾಯಾಲಯ) ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಅವರು ಭೇಟಿ ನೀಡಿ, ಕೈದಿಗಳ ಸುಧಾರಣೆ ಹಾಗೂ ಪುನರ್ವಸತಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ನೂತನ ಯೋಜನೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ (ಹೈಕೋರ್ಟ್) ನ್ಯಾಯಮೂರ್ತಿಗಳಾದ ವಿಭು ಭಕ್ರು ಹಾಗೂ ಅನು ಸಿವರಾಮನ್ ಅವರು ಉಪಸ್ಥಿತರಿದ್ದರು.
ಕಾರಾಗೃಹದ ಕೈದಿಗಳಲ್ಲಿ ವೃತ್ತಿಪರ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ “ಸೆಲ್ ಟು ಸ್ಕಿಲ್” ಯೋಜನೆಯಡಿ ನೂತನವಾಗಿ ಸ್ಥಾಪಿಸಲಾಗಿರುವ ಕಂಪ್ಯೂಟರ್ ಲ್ಯಾಬ್ ಅನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಅವರು ಉದ್ಘಾಟಿಸಿದರು. ಈ ತರಬೇತಿಯು ಶಿಕ್ಷೆ ಮುಗಿದ ಬಳಿಕ ಕೈದಿಗಳು ಸಮಾಜದ ಮುಖ್ಯವಾಹಿನಿಗೆ ಮರಳಿ ಗೌರವಯುತ ಜೀವನ ನಡೆಸಲು ಮತ್ತು ಸ್ವಾವಲಂಬಿ ಉದ್ಯೋಗ ಕಂಡುಕೊಳ್ಳಲು ದಾರಿದೀಪವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ನ್ಯಾಯಮೂರ್ತಿಗಳ ತಂಡವು ಕಾರಾಗೃಹದ ಪ್ರಮುಖ ವಿಭಾಗಗಳಿಗೆ ಭೇಟಿ ನೀಡಿ ಕೈದಿಗಳಿಗೆ ಒದಗಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿತು:
ಡಿ-ಅಡಿಕ್ಷನ್ ಸೆಂಟರ್: ವ್ಯಸನಮುಕ್ತ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ಪದ್ಧತಿಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಟೆಲಿ-ಮನಸ್ ಸೇವೆಗೆ ಚಾಲನೆ: ಮಹಿಳಾ ಕಾರಾಗೃಹ ವಿಭಾಗದಲ್ಲಿ ಮಾನಸಿಕ ಆರೋಗ್ಯ ಕಾಳಜಿಗಾಗಿ ‘ಟೆಲಿ-ಮನಸ್’ ಸೇವೆಗೆ ಚಾಲನೆ ನೀಡಲಾಯಿತು.
ಶಿಶುಪಾಲನಾ ಕೇಂದ್ರಕ್ಕೆ ಭೇಟಿ: ಮಹಿಳಾ ವಿಭಾಗದಲ್ಲಿರುವ ಶಿಶುಪಾಲನಾ ಕೇಂದ್ರದ ವ್ಯವಸ್ಥೆಗಳನ್ನು ನ್ಯಾಯಮೂರ್ತಿಗಳು ವೀಕ್ಷಿಸಿದರು.
ಭೇಟಿಯ ವೇಳೆ ಮಹಿಳಾ ಕೈದಿಗಳೊಂದಿಗೆ ನೇರ ಸಂವಾದ ನಡೆಸಿದ ನ್ಯಾಯಮೂರ್ತಿಗಳು, ಅವರ ದೈನಂದಿನ ಸಮಸ್ಯೆಗಳು, ಅಗತ್ಯತೆಗಳು ಹಾಗೂ ಕಾರಾಗೃಹದಲ್ಲಿ ಸಿಗುತ್ತಿರುವ ಪುನರ್ವಸತಿ ಕ್ರಮಗಳ ಕುರಿತು ಮುಕ್ತವಾಗಿ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು, ಕಾನೂನು ರಕ್ಷಾ ಸಹಾಯಕರು ಹಾಗೂ ಕಾನೂನು ನೆರವು ಪಡೆದಿರುವ ಶಿಕ್ಷಾಬಂದಿಗಳೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ಕಾರಾಗೃಹದಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳು, ಕೈದಿಗಳ ಮಾನಸಿಕ ಆರೋಗ್ಯಕ್ಕೆ ನೀಡುತ್ತಿರುವ ಆದ್ಯತೆ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
ಮಾನ್ಯ ನ್ಯಾಯಮೂರ್ತಿಗಳು ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕರು (DGP) ಆದ ಶ್ರೀ ಅಲೋಕ್ ಕುಮಾರ್ ಹಾಗೂ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ನಾರಾಯಣ್ ಉಪಸ್ಥಿತರಿದ್ದರು.

