ಬೆಂಗಳೂರು: ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡು ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಅಂತರ ಜಿಲ್ಲಾ ಸರಗಳ್ಳರನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಮೋದ್ ಬಸಪ್ಪ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ತಿಂಗಳು 18ರಂದು ಸಂಜೆ ವೇಳೆ ವೃದ್ಧೆಯೊಬ್ಬರು ಕುಕ್ಕರ್ ರಿಪೇರಿ ಮಾಡಿಸಿ ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಬೈಕ್ನಲ್ಲಿ ಬಂದು, ಕ್ಷಣಾರ್ಧದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಅತಿ ವೇಗವಾಗಿ ಪರಾರಿಯಾಗಿದ್ದರು. ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ತಕ್ಷಣವೇ ತನಿಖಾ ತಂಡವನ್ನು ರಚಿಸಿದ್ದರು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿ ಮತ್ತು ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಕಳವು ಮಾಡಿದ ಚಿನ್ನದ ಸರವನ್ನು ಆರೋಪಿಗಳು ಗದಗ್ನಲ್ಲಿ ಅಡವಿಟ್ಟಿದ್ದರು. ಅದರಿಂದ ಬಂದ ಹಣದಲ್ಲಿ ಇಬ್ಬರೂ ಜಿಲೇಬಿ-ಬಿರಿಯಾನಿ ತಿಂದು, ಮೋಜು-ಮಸ್ತಿ ಮಾಡುತ್ತಾ ಐಶಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸದ್ಯ 45 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಬೇರೆ ಎಲ್ಲಾದರೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.