ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ರೈಲು ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಸದಾ ಆತಂಕದ ವಿಷಯವಾಗಿರುವ ಬೆನ್ನಲ್ಲೇ, ಮನುಷ್ಯನ ವಿಕೃತಿಯ ಪರಾಕಾಷ್ಠೆಯನ್ನು ತೋರಿಸುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಚಲಿಸುವ ರೈಲಿನಲ್ಲಿ ಕಿಟಕಿಯ ಮೂಲಕ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಆ ಮೂತ್ರವನ್ನು ಪಕ್ಕದಲ್ಲೇ ಮಲಗಿದ್ದ ಸಹ ಮಹಿಳಾ ಪ್ರಯಾಣಿಕರ ಮೇಲೆ ಸಿಡಿಸಿದ ವಿಕೃತ ಕಾಮುಕನಿಗೆ ಪ್ರಯಾಣಿಕರು ರೈಲಿನಲ್ಲೇ ಧರ್ಮದೇಟು ನೀಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಘಟನೆ ನಡೆದಿರುವುದು ಮಧ್ಯರಾತ್ರಿಯ ಸಮಯದಲ್ಲಿ ಎಂದು ತಿಳಿದುಬಂದಿದೆ. ರೈಲಿನ ಬೋಗಿಯಲ್ಲಿದ್ದ ಸಹ ಪ್ರಯಾಣಿಕರೆಲ್ಲರೂ ಗಾಢ ನಿದ್ರೆಗೆ ಜಾರಿದ್ದಾಗ, ಈ ವಿಕೃತ ವ್ಯಕ್ತಿ ರೈಲಿನ ಕಿಟಕಿಯ ಬಳಿ ನಿಂತು ಕಿಟಕಿಯಿಂದಲೇ ಮೂತ್ರ ವಿಸರ್ಜಿಸಲು ಶುರು ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ವಿಕೃತಿ, ಕಿಟಕಿಯ ಪಕ್ಕದ ಸೀಟಿನಲ್ಲೇ ನಿದ್ರಿಸುತ್ತಿದ್ದ ಅನ್ಯ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರವನ್ನು ಉದ್ದೇಶಪೂರ್ವಕವಾಗಿ ಸಿಡಿಸಿ ವಿಕೃತ ಆನಂದ ಪಟ್ಟಿದ್ದಾನೆ.
ತನ್ನ ಮೈಮೇಲೆ ಏನೋ ದ್ರವ ಸಿಡಿಯುತ್ತಿರುವುದನ್ನು ಗಮನಿಸಿದ ಮಹಿಳೆ ತಕ್ಷಣವೇ ದಿಡುಗನೆ ಎಚ್ಚರಗೊಂಡಿದ್ದಾರೆ. ಈ ವೇಳೆ ಗಾಬರಿಗೊಂಡ ಆ ವಿಕೃತ ವ್ಯಕ್ತಿ ಕೂಡಲೇ ಪ್ಯಾಂಟ್ ಜಿಪ್ ಹಾಕಿಕೊಂಡು, ತನಗೇನೂ ತಿಳಿಯದವನಂತೆ ಸದ್ದಿಲ್ಲದೆ ತನ್ನ ಸೀಟಿನಲ್ಲಿ ಬಂದು ಕುಳಿತುಕೊಂಡಿದ್ದಾನೆ. ಆದರೆ, ಆತನ ಈ ಅಸಹ್ಯಕರ ಕೃತ್ಯದಿಂದ ತೀವ್ರ ಆಕ್ರೋಶಗೊಂಡ ಮಹಿಳೆ, ಆತನನ್ನು ನೇರವಾಗಿ ಹಿಡಿದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಬೋಗಿಯಲ್ಲೇ ಜೋರಾಗಿ ಮಾತಿನ ಚಕಮಕಿ ನಡೆದಿದೆ.
ಮಹಿಳೆ ಮತ್ತು ಆ ವ್ಯಕ್ತಿಯ ನಡುವೆ ಗಲಾಟೆ ಶುರುವಾಗುತ್ತಿದ್ದಂತೆ, ಮಹಿಳೆಯ ಪಕ್ಕದ ಸೀಟಿನಲ್ಲಿದ್ದ ಆಕೆಯ ಸಂಬಂಧಿಕ ಮಹಿಳೆ ಹಾಗೂ ಮತ್ತೊಬ್ಬ ಪುರುಷ ಪ್ರಯಾಣಿಕ ಎಚ್ಚರಗೊಂಡು ಸಹಾಯಕ್ಕೆ ಧಾವಿಸಿದ್ದಾರೆ. ನೊಂದ ಮಹಿಳೆ ತನಗಾದ ಅನ್ಯಾಯವನ್ನು ವಿವರಿಸುತ್ತಿದ್ದಂತೆ ಇಡೀ ಬೋಗಿಯಲ್ಲಿದ್ದ ಪ್ರಯಾಣಿಕರು ಶಾಕ್ ಆಗಿದ್ದಾರೆ. ತಕ್ಷಣವೇ ಆಕ್ರೋಶಗೊಂಡ ಮಹಿಳೆಯ ಕಡೆಯವರು ಮತ್ತು ಇತರೆ ಸಹ ಪ್ರಯಾಣಿಕರು ಆ ಭಂಡನನ್ನು ಹಿಡಿದು ರೈಲಿನಲ್ಲೇ ಸರಿಯಾಗಿ ಥಳಿಸಿ ತಕ್ಕ ಪಾಠ ಕಲಿಸಿದ್ದಾರೆ.
ಸದ್ಯ ಈ ಇಡೀ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆತನನ್ನು ‘ಮನುಷ್ಯ ರೂಪದ ಮೃಗ’ ಎಂದು ಕರೆದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ವಿವೇಕಹೀನ ಘಟನೆ ಯಾವ ರೈಲಿನಲ್ಲಿ ನಡೆದಿದೆ? ಯಾವ ಮಾರ್ಗದಲ್ಲಿ ಚಲಿಸುತ್ತಿತ್ತು? ಮತ್ತು ಯಾವ ದಿನಾಂಕದಂದು ನಡೆದಿದೆ ಎಂಬ ಬಗ್ಗೆ ಇನ್ನೂ ನಿಖರವಾದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಆದರೆ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ರೈಲ್ವೆ ಪೊಲೀಸರು ವೈರಲ್ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ತಕ್ಷಣವೇ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು. ಹಾಗೂ ರೈಲುಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಹಿಳಾ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಬೇಕಿದೆ ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ.