ದಾಂಡೇಲಿ: ದಾಂಡೇಲಿ ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ, ಕುಖ್ಯಾತ ರೌಡಿ ಆಸಾಮಿ ಬಾಬು ದೊಡ್ಡಮನಿ (೪೧) ಎಂಬಾತನನ್ನು ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ದಾಂಡೇಲಿಯ ಬರ್ಚಿ ರಸ್ತೆ, ಜನತಾ ವಿದ್ಯಾಲಯ ಸಮೀಪದ ನಿವಾಸಿಯಾಗಿರುವ ಬಾಬು ತಂದೆ ರಾಮಪ್ಪ ದೊಡ್ಡಮನಿ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಇತಿಹಾಸವೇ ಇದೆ.
ಈತನ ವಿರುದ್ಧ ೨೦೧೨ ರಿಂದ ೨೦೨೫ರ ಅವಧಿಯಲ್ಲಿ ಒಟ್ಟು ೯ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಕೊಲೆ ಯತ್ನ, ದೊಂಬಿ, ಜೂಜಾಟ, ಲೈಂಗಿಕ ದೌರ್ಜನ್ಯ, ಸಾರ್ವಜನಿಕರ ಮೇಲೆ ಹಲ್ಲೆ ಹಾಗೂ ಎಸ್ಸಿ-ಎಸ್ಟಿ (SC-ST) ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಈತನ ಹೆಸರಿನಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು.
ಪೊಲೀಸ್ ಇಲಾಖೆಯ ತೀವ್ರ ನಿಗಾದ ನಡುವೆಯೂ ಆರೋಪಿ ಬಾಬು ದೊಡ್ಡಮನಿ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದನು. ನಿರಂತರವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ, ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸುತ್ತಿದ್ದನು. ಮುಂಬರುವ ದಿನಗಳಲ್ಲೂ ಈತನಿಂದ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ನಿಶ್ಚಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ದಾಂಡೇಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆಯಡಿ ತಮ್ಮ ಅಧಿಕಾರ ಚಲಾಯಿಸಿ ಮಹತ್ವದ ಆದೇಶ ನೀಡಿದ್ದಾರೆ. ಬಾಬು ದೊಡ್ಡಮನಿ ಇನ್ನು ಆರು ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸುವಂತಿಲ್ಲ. ಬದಲಾಗಿ ಆತ ಬೀದರ್ ಜಿಲ್ಲೆಯ ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ವಾಸಿಸಬೇಕು ಎಂದು ಕಡ್ಡಾಯಗೊಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದನ್ವಯ ತಕ್ಷಣವೇ ಕಾರ್ಯಪ್ರವೃತ್ತರಾದ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಆರೋಪಿ ಬಾಬು ದೊಡ್ಡಮನಿಯನ್ನು ವಶಕ್ಕೆ ಪಡೆದು ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಇಲಾಖೆಯ ಈ ಕಠಿಣ ಕ್ರಮಕ್ಕೆ ದಾಂಡೇಲಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.