ಚಿತ್ತಾಪುರ (ಕಲಬುರಗಿ): ತಾಲ್ಲೂಕಿನ ಕೃಷಿ ಜಮೀನುಗಳಲ್ಲಿ ರೈತರು ಅಳವಡಿಸಿದ್ದ ಮೋಟಾರ್ ಪಂಪ್ ಹಾಗೂ ವಿದ್ಯುತ್ ಕೇಬಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರಾಷ್ಟ್ರೀಯ ಮಾದರಿಯ ಸ್ಥಳೀಯ ಕಳ್ಳರನ್ನು ಚಿತ್ತಾಪುರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 60,000 ರೂ. ಮೌಲ್ಯದ 3 ಹೆಚ್.ಪಿ ತೂಕದ 3 ಮೋಟಾರ್ ಪಂಪ್‌ಗಳನ್ನು ಜಪ್ತಿ ಮಾಡಲಾಗಿದೆ.
ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನುಗಳಲ್ಲಿ ಸರಣಿ ಮೋಟಾರ್ ಪಂಪ್ ಹಾಗೂ ಕೇಬಲ್ ಕಳ್ಳತನವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದ ಠಾಣೆಯ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಅವರ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳವು ಮಾಡಲಾಗಿದ್ದ ಒಟ್ಟು 60,000 ರೂ. ಅಂದಾಜು ಮೌಲ್ಯದ, 3 HP ಸಾಮರ್ಥ್ಯದ 3 ಮೋಟಾರ್ ಪಂಪ್‌ಗಳನ್ನು ಯಶಸ್ವಿಯಾಗಿ ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ರೈತರ ಕಷ್ಟದ ದುಡಿಮೆಯ ತೋಟದ ಸಾಮಗ್ರಿಗಳನ್ನು ಕಡಿದು ಹಾಕುತ್ತಿದ್ದ ಕಳ್ಳರನ್ನು ಪತ್ತೆ ಹಚ್ಚಿ, ಜಪ್ತಿ ಮಾಡಿದ ಚಿತ್ತಾಪುರ ಪೊಲೀಸರ ಸಮಯೋಚಿತ ಕಾರ್ಯಾಚರಣೆಗೆ ಗ್ರಾಮೀಣ ಭಾಗದ ರೈತರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.