ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಮನುಗನಹಳ್ಳಿ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬಿಳಿಕೆರೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೇರಳ ಮೂಲದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಕೇರಳ ರಾಜ್ಯದವರಾದ ಜಿಷ್ಣು ರಾಜಗೋಪಾಲ್.ಎಂ (31) ಮತ್ತು ಆಕಾಶ್.ಎಸ್ (29) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 4.50 ಲಕ್ಷ ರೂಪಾಯಿ ಮೌಲ್ಯದ ಬಲೆನೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ವರ್ಷ (2025ರ ನವೆಂಬರ್ 21ರಂದು) ಮನುಗನಹಳ್ಳಿಯ ನಿಸರ್ಗ ಪ್ಯಾರಡೈಸ್ ಲೇಔಟ್‌ನಲ್ಲಿರುವ ಶಿವಕುಮಾರ.ಎನ್ ಎಂಬುವರ ಮನೆಯ ಹಿಂಬದಿಯ ಕಿಟಕಿ ಒಡೆದು ಒಳನುಗ್ಗಿದ್ದ ಕಳ್ಳರು, ಬೀರು ಹಾಗೂ ಲಾಕರ್‌ನಲ್ಲಿದ್ದ 72 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಬ್ರೇಸ್‌ಲೆಟ್, ಉಂಗುರ, ಮಾಂಗಲ್ಯ ಸರ ಹಾಗೂ 93,000 ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗೇಶ.ಎಲ್ ಅವರ ಸೂಚನೆಯಂತೆ, ಹುಣಸೂರು ಉಪವಿಭಾಗದ ಡಿವೈಎಸ್ಪಿ ರವಿ ಅವರ ಮಾರ್ಗದರ್ಶನದಲ್ಲಿ ಬಿಳಿಕೆರೆ ಇನ್ಸ್ಪೆಕ್ಟರ್ ಪುನೀತ್.ಟಿ.ಎಂ ನೇತೃತ್ವದ ವಿಶೇಷ ತಂಡ ತನಿಖೆ ಕೈಗೊಂಡಿತ್ತು.
ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಹಾಯದಿಂದ ಆರೋಪಿಗಳ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಬಿಳಿಕೆರೆ ಇನ್ಸ್ಪೆಕ್ಟರ್ ಪುನೀತ್.ಟಿ.ಎಂ, ಅಪರಾಧ ವಿಭಾಗದ ಪಿಎಸ್ಐ ಶ್ರೀಮತಿ ಇಷರತ್ ಬೇಗಂ, ಸಿಬ್ಬಂದಿಗಳಾದ ರವಿ, ಶ್ರೀಕಂಠ, ಅನಂತರಾಮು, ಪ್ರತಾಪ್, ಶಿವಕುಮಾರ, ಜಯರಾಮೇಗೌಡ, ಪ್ರಸಾದ್ ಧರ್ಮಾಪುರ ಹಾಗೂ ತಾಂತ್ರಿಕ ವಿಭಾಗದ ಎಎಸ್ಐ ವಸಂತ್ ಕುಮಾರ್, ಸುನೀತಾ ಮತ್ತು ಚಾಲಕ ಗೋವಿಂದ ಅವರ ತಂಡವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಅಭಿನಂದಿಸಿದ್ದಾರೆ.