ರಾಮನಗರ: ಜಿಲ್ಲೆಯ ವಿವಿಧೆಡೆ ಕುರಿ, ಮೇಕೆ ಹಾಗೂ ಕೋಳಿಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜುಲೈ 23, 2026 ರಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಭಾವಿದೊಡ್ಡಿ ಗ್ರಾಮದಲ್ಲಿ ದೂರುದಾರರ ಕೊಟ್ಟಿಗೆಯಲ್ಲಿದ್ದ 02 ಕುರಿಗಳನ್ನು ಕಳ್ಳರು ಎಗರಿಸಿದ್ದರು. ಈ ಸಂಬಂಧ ನೀಡಿದ ದೂರಿನನ್ವಯ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ನಂ. 156/2026, ಕಲಂ 303(2) BNS) ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳ ಸುಳಿವು ಪಡೆದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ರಾಮನಗರ ಗ್ರಾಮಾಂತರ ಠಾಣಾ ಸರಹದ್ದಿನ ಕಾಳೇಗೌಡನದೊಡ್ಡಿ, ದೊಡ್ಡಮಣ್ಣುಗುಡ್ಡೆ, ಪಾಲಭೋವಿದೊಡ್ಡಿ ಹಾಗೂ ಚನ್ನಪಟ್ಟಣ ಗ್ರಾಮಾಂತರ ಠಾಣಾ ಸರಹದ್ದಿನ ಚಿಕ್ಕನದೊಡ್ಡಿ ಮತ್ತು ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಗ್ರಾಮಗಳಲ್ಲಿಯೂ ಕುರಿ, ಮೇಕೆ ಮತ್ತು ಕೋಳಿಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿ, ಕಳುವಾಗಿದ್ದ 15 ಮೇಕೆಗಳು ಹಾಗೂ 1 ಕುರಿಯನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.