Share News

ಕೋಲಾರ: ಪತಿಯ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಬಳಿಕ ಪತ್ನಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

​ಚನ್ನಸಂದ್ರ ಗ್ರಾಮದ ನಾರಾಯಣಸ್ವಾಮಿ (68) ಕೊಲೆಯಾದ ದುರದೃಷ್ಟಕರ ಪತಿ. ಆತನ ಪತ್ನಿ ಜಗದಾಂಭ (58) ಕೊಲೆ ಎಸಗಿದ ಆರೋಪಿಯಾಗಿದ್ದಾರೆ.

​ಜಮೀನು ಹಣದ ವಿವಾದವೇ ಕೊಲೆಗೆ ಕಾರಣ?:

ದಂಪತಿ ಕಳೆದ ಕೆಲವು ಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜಮೀನು ಮಾರಾಟದ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಿವಾದವಿತ್ತು. ಈಗಾಗಲೇ ಮಾರಾಟ ಮಾಡಿದ್ದ ಎರಡು ಎಕರೆ ಜಮೀನಿನ ಹಣವನ್ನು ಪತಿ ತನಗೆ ನೀಡಿರಲಿಲ್ಲ ಎಂಬ ಆಕ್ರೋಶ ಪತ್ನಿಗಿತ್ತು. ಇದರ ಜೊತೆಗೆ, ಉಳಿದಿರುವ ಎರಡು ಎಕರೆ ಜಮೀನನ್ನೂ ಪತಿ ಎಲ್ಲಿ ಮಾರಾಟ ಮಾಡಿಬಿಡುತ್ತಾನೋ ಎಂಬ ಭಯದಿಂದ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

​ಸಂಚು ರೂಪಿಸಿ ತೋಟದ ಮನೆಗೆ ಕರೆತಂದು ಕೊಲೆ:

ಪತಿಯನ್ನು ಮುಗಿಸಲು ಯೋಜನೆ ರೂಪಿಸಿದ್ದ ಜಗದಾಂಭ, ಆತನನ್ನು ಪುಸಲಾಯಿಸಿ ತೋಟದ ಮನೆಗೆ ಕರೆತಂದಿದ್ದಳು. ನಂತರ ಊಟದಲ್ಲಿ 10 ನಿದ್ರೆ ಮಾತ್ರೆಗಳನ್ನು ಬೆರೆಸಿಕೊಟ್ಟಿದ್ದಾಳೆ. ಮಾತ್ರೆಗಳ ಪ್ರಭಾವದಿಂದ ನಾರಾಯಣಸ್ವಾಮಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.

​ವೇಮಗಲ್ ಠಾಣೆಗೆ ತೆರಳಿ ಶರಣು – ಎಸ್ಪಿ ಭೇಟಿ:

ಕೃತ್ಯ ಎಸಗಿದ ಬಳಿಕ ಆರೋಪಿ ಜಗದಾಂಭ ನೇರವಾಗಿ ವೇಮಗಲ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಕೊಲೆ ವಿಷಯವನ್ನು ಒಪ್ಪಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News