Share News

ರಾಜಧಾನಿ ಬೆಂಗಳೂರಿನ ಕೆ.ಆರ್. ಪುರಂ ಹಾಗೂ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಭೋಗನಹಳ್ಳಿಯಲ್ಲಿ ರಾತ್ರೋರಾತ್ರಿ ನಿಯಮಬಾಹಿರವಾಗಿ ನಡೆಯುತ್ತಿರುವ ಬಂಡೆ ಬ್ಲಾಸ್ಟಿಂಗ್‌ನಿಂದಾಗಿ (Rock Blasting) ಸ್ಥಳೀಯ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತಾಗಿದೆ. ಖಾಸಗಿ ಕಂಪನಿಯೊಂದರ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ಅನುಕೂಲ ಮಾಡಿಕೊಡಲು ಕಾಂಟ್ರಾಕ್ಟರ್‌ಗಳು ಅತಿಯಾದ ಜಿಲೇಟಿನ್ ಬಳಸಿ ಅಕ್ರಮವಾಗಿ ಸ್ಫೋಟ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

​ಶಾಲಾ ಮಕ್ಕಳ ಜೀವಕ್ಕೆ ಅಪಾಯ:

ಈ ನಿರಂತರ ಭಾರಿ ಸ್ಫೋಟಗಳ ಪರಿಣಾಮ ಸುತ್ತಮುತ್ತಲಿನ ಮನೆಗಳು ಮಾತ್ರವಲ್ಲದೆ, ಸ್ಥಳೀಯ ಸರ್ಕಾರಿ ಶಾಲೆಯ ಕಟ್ಟಡದ ಗೋಡೆಗಳೂ ಸಹ ಬಿರುಕು ಬಿಟ್ಟಿವೆ. ಪ್ರತಿನಿತ್ಯ ಶಾಲೆಗೆ ಆಗಮಿಸುವ ನೂರಾರು ಮುಗ್ಧ ವಿದ್ಯಾರ್ಥಿಗಳ ಜೀವಕ್ಕೆ ಕಂಟಕ ಎದುರಾಗಿದ್ದು, ಪೋಷಕರಲ್ಲಿ ಭೀತಿ ಆವರಿಸಿದೆ.

​ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲೈಸೆನ್ಸ್ ಹೋಲ್ಡರ್‌ಗೆ ಬೆದರಿಕೆ:

ಈ ಹಿಂದೆ ಇದೇ ಪ್ರದೇಶದಲ್ಲಿ ಪೊಲೀಸರು 800 ಕೆಜಿಗೂ ಹೆಚ್ಚು ಸಿಡಿಮದ್ದನ್ನು ಜಪ್ತಿ ಮಾಡಿದ್ದರೂ ಅಕ್ರಮಕ್ಕೆ ಕಡಿವಾಣ ಬಿದ್ದಿಲ್ಲ. ಸ್ಥಳೀಯರು ನೀಡಿದ ದೂರುಗಳಿಗೆ ಕೇವಲ ‘ಎನ್‌ಸಿಆರ್’ (NCR) ದಾಖಲಿಸಿ ಪೊಲೀಸರು ಕೈತೊಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಮತ್ತೊಂದೆಡೆ, ಅಕ್ರಮವಾಗಿ ಭಾರಿ ಪ್ರಮಾಣದ ಜಿಲೇಟಿನ್ ಬಳಸಿ ಸ್ಫೋಟಿಸಲು ನಿರಾಕರಿಸಿದ ಲೈಸೆನ್ಸ್ ಹೋಲ್ಡರ್ ಸತೀಶ್ ನಾಯಕ್ ಎಂಬುವರಿಗೆ ಕಾಂಟ್ರಾಕ್ಟರ್‌ಗಳು ಜೀವ ಬೆದರಿಕೆ ಹಾಕಿದ್ದು, ಕೆಲಸದ ಹಣ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

​ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:

ಸ್ಥಳೀಯರ ಜೀವ ಮತ್ತು ಆಸ್ತಿಪಾಸ್ತಿಗೆ ಅಪಾಯ ತಂದೊಡ್ಡುತ್ತಿರುವ ಈ ಅಕ್ರಮ ಬ್ಲಾಸ್ಟಿಂಗ್ ಜಾಲವನ್ನು ತಕ್ಷಣವೇ ಸ್ಥಗಿತಗೊಳಿಸಿ, ತಪ್ಪಿತಸ್ಥರ ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೋಗನಹಳ್ಳಿಯ ನಿವಾಸಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.


Share News