ಬೆಂಗಳೂರಿನ ಬಿಜಿ (ಬನ್ನೇರುಘಟ್ಟ) ರಸ್ತೆಯಲ್ಲಿರುವ ಪ್ರಸಿದ್ಧ ಅಪೋಲೋ ಆಸ್ಪತ್ರೆಯ ಕ್ಯಾಂಟೀನ್ ಮೇಲೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯ (FSSAI) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಜಪ್ತಿ:
ದಾಳಿಯ ವೇಳೆ ಕ್ಯಾಂಟೀನ್‌ನಲ್ಲಿ ನಿಯಮ ಗಾಳಿಗೆ ತೂರಿ ಸಂಗ್ರಹಿಸಿಡಲಾಗಿದ್ದ ಅವಧಿ ಮೀರಿದ (Expired) ರವೆ, ಐಸಿಂಗ್ ಸಕ್ಕರೆ, ಮೈದಾ ಸೇರಿದಂತೆ ವಿವಿಧ ಬೇಕರಿ ಪದಾರ್ಥಗಳು ಪತ್ತೆಯಾಗಿವೆ. ಜೊತೆಗೆ ಅವಧಿ ಮುಗಿದಿದ್ದ ಪಾನಿಪುರಿ, ಮಿಕ್ಸ್ಚರ್ ಹಾಗೂ ಪ್ಯಾಕ್ ಮಾಡಲಾಗಿದ್ದ ಮೆಂತೆ ಸೊಪ್ಪು, ಬಟಾಣಿ ಮತ್ತು ಹಸಿರು ಬೇಳೆಯ ಅವಧಿ ಮೀರಿದ ಪ್ಯಾಕೆಟ್‌ಗಳು ಅಧಿಕಾರಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿವೆ.
ಕಠಿಣ ಕ್ರಮಕ್ಕೆ ಅಧಿಕಾರಿಗಳ ಸಿದ್ಧತೆ:
ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಹಾಗೂ ಬಳಕೆಯ ಅವಧಿಯ ಕುರಿತು ತೀವ್ರ ತಪಾಸಣೆ ನಡೆಸಿರುವ ಅಧಿಕಾರಿಗಳು, ಕ್ಯಾಂಟೀನ್‌ನಲ್ಲಿ ಗಂಭೀರ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ. ಸಾರ್ವಜನಿಕರು ಹಾಗೂ ರೋಗಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕ್ಯಾಂಟೀನ್ ಆಡಳಿತ ಮಂಡಳಿಯ ವಿರುದ್ಧ ಕಾನೂನು ಪ್ರಕಾರ ಮುಂದಿನ ಕಠಿಣ ಕ್ರಮ ಜರುಗಿಸಲು ಇಲಾಖೆ ನಿರ್ಧರಿಸಿದೆ.