ಬೆಂಗಳೂರು: ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ಶಾಂತಿ ಸಭೆ, ಎಸ್‌ಸಿ-ಎಸ್‌ಟಿ ಜನರ ಕುಂದುಕೊರತೆ ಹಾಗೂ ಮಾಸಿಕ ಜನಸಂಪರ್ಕ ಸಭೆಗಳಲ್ಲಿ ಭಾಗವಹಿಸುವ ಸಾರ್ವಜನಿಕರನ್ನು ನೆಲದ ಮೇಲೆ ಕೂರಿಸಿ ಅಧಿಕಾರಿಗಳು ಕುರ್ಚಿಯಲ್ಲಿ ಕುಳಿತುಕೊಳ್ಳುವ ಅಸಮಾನತೆಯ ಪದ್ಧತಿಯನ್ನು ತಕ್ಷಣವೇ ತಡೆಯುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಆಗ್ರಹಿಸಿದ್ದಾರೆ. ಈ ಕುರಿತು ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (DG-IGP) ಅಧಿಕೃತ ಪತ್ರ ಬರೆದಿದ್ದಾರೆ.
ಪೋಲಿಸ್ ಠಾಣೆ ಮಟ್ಟದಿಂದ ಹಿಡಿದು ಎಸ್‌ಪಿ ಹಾಗೂ ಐಜಿಪಿಗಳ ನೇತೃತ್ವದಲ್ಲಿ ನಡೆಯುವ ವಿವಿಧ ಸಭೆಗಳಲ್ಲಿ ಸಾರ್ವಜನಿಕರನ್ನು ನೆಲದ ಮೇಲೆ ಕೂರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ಖಾತೆಗಳಲ್ಲಿಯೇ ಕಂಡುಬರುತ್ತಿವೆ. ಈ ವ್ಯವಸ್ಥೆಯು ಸಾರ್ವಜನಿಕರ ಸ್ವಾಭಿಮಾನ, ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಅಸಮಾನತೆ ಉಂಟುಮಾಡುತ್ತದೆ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲ ಉಲ್ಲೇಖಿಸಿರುವ ಪ್ರಮುಖ ಅಂಶಗಳು:
ಜನಸ್ನೇಹಿ ಪರಿಕಲ್ಪನೆಗೆ ಧಕ್ಕೆ: ಪೊಲೀಸರು ಸಾರ್ವಜನಿಕರ ಸೇವಕರು ಎಂಬ ಪ್ರಜಾಪ್ರಭುತ್ವದ ಆಶಯಕ್ಕೆ ಈ ರೀತಿಯ ತಾರತಮ್ಯದ ವರ್ತನೆ ವಿರುದ್ಧವಾಗಿದೆ.
ಸಮಾನ ಆಸನ ವ್ಯವಸ್ಥೆ ಕಡ್ಡಾಯ: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು, ಕಚೇರಿಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ನಡೆಸುವ ಸಭೆಗಳಲ್ಲಿ ಅಧಿಕಾರಿಗಳಂತೆಯೇ ಸಾರ್ವಜನಿಕರಿಗೂ ಕಡ್ಡಾಯವಾಗಿ ಸಮಾನ ಆಸನ/ಕುರ್ಚಿ ವ್ಯವಸ್ಥೆ ಕಲ್ಪಿಸಬೇಕು.
ಆದೇಶ ಹೊರಡಿಸಲು ಮನವಿ: ಈ ತಾರತಮ್ಯವನ್ನು ತೊಡೆದುಹಾಕಲು ರಾಜ್ಯದ ಎಲ್ಲಾ ವಿಭಾಗಗಳ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಅಥವಾ ಜ್ಞಾಪನಾ ಪತ್ರ ಹೊರಡಿಸಬೇಕೆಂದು ಕೆಎಸ್‌ಪಿಸಿಎ ಸದಸ್ಯರು ಕೋರಿದ್ದಾರೆ.
ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಬೇಕಾದ ಸಭೆಗಳು ಸ್ಥಾನಮಾನದ ಅಂತರ ಪ್ರದರ್ಶಿಸುವ ವೇದಿಕೆಗಳಾಗಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
