ಬೆಂಗಳೂರು: ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್-7 ರಲ್ಲಿರುವ ಎಲೆಕ್ಟ್ರಾನಿಕ್ ಮಳಿಗೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಪೊಲೀಸರು, ಹೊರರಾಜ್ಯ ಮೂಲದ ಆರೋಪಿಯನ್ನು ಬಂಧಿಸಿ, ಆತನಿಂದ ₹20 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನಿಂದ 09 ಲ್ಯಾಪ್ಟಾಪ್ಗಳು, 02 ಟ್ಯಾಬ್ಗಳು ಹಾಗೂ 11 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹20,00,000/- (ಇಪ್ಪತ್ತು ಲಕ್ಷ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಕಳೆದ ಮೇ 23, 2026 ರಂದು ರಾತ್ರಿ ಹೆಚ್.ಎಸ್.ಆರ್. ಲೇಔಟ್ನ ಸೆಕ್ಟರ್-7 ರಲ್ಲಿರುವ ಎಲೆಕ್ಟ್ರಾನಿಕ್ ಮಳಿಗೆಯ ಕಿಟಕಿಯ ಗ್ರಿಲ್ಗಳನ್ನು ಮುರಿದ ಅಪರಿಚಿತ ಕಳ್ಳರು, ಅಂಗಡಿಯಲ್ಲಿದ್ದ ವಿವಿಧ ಕಂಪನಿಯ ಮೊಬೈಲ್, ಮ್ಯಾಕ್ ಬುಕ್, ಲ್ಯಾಪ್ಟಾಪ್ ಹಾಗೂ ಟ್ಯಾಬ್ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಳಿಗೆಯ ಮ್ಯಾನೇಜರ್ ಮೇ 24, 2026 ರಂದು ನೀಡಿದ ದೂರಿನನ್ವಯ ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಜುಲೈ 21, 2026 ರಂದು ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ಖಚಿತ ಮಾಹಿತಿ ಆಧರಿಸಿ 02 ಲ್ಯಾಪ್ಟಾಪ್ಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕೃತ್ಯವೆಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದ ಪೊಲೀಸರು, ಆತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಕಳವು ಮಾಡಿದ ವಸ್ತುಗಳನ್ನು ತಮಿಳುನಾಡಿನ ಚೆನ್ನೈನಲ್ಲಿರುವ ತನ್ನ ಮನೆಯಲ್ಲಿಟ್ಟಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದ. ತಕ್ಷಣ ಜುಲೈ 23, 2026 ರಂದು ಚೆನ್ನೈಗೆ ತೆರಳಿದ ಪೊಲೀಸ್ ತಂಡವು, ಆತನ ಮನೆಯಲ್ಲಿದ್ದ 02 ಟ್ಯಾಬ್, 11 ಮೊಬೈಲ್ ಹಾಗೂ 07 ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಿದೆ. ವಿಚಾರಣೆ ಮುಗಿದ ಬಳಿಕ ಜುಲೈ 25 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಮೊಹಮ್ಮದ್ ಸುಜೀತಾ.ಎಂ.ಎಸ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಶ್ರೀ ವಾಸುದೇವ.ವಿ.ಕೆ ರವರ ನೇತೃತ್ವದಲ್ಲಿ, ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಧರ್ಮೇಗೌಡ ಹಾಗೂ ಅಧಿಕಾರಿ/ಸಿಬ್ಬಂದಿಯನ್ನೊಳಗೊಂಡ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.