ಧಾರವಾಡ: ನಗರದ ಶಿವಗಿರಿ ಲಾಸ್ಟ್ ಬಸ್ ಸ್ಟಾಪ್ ಹತ್ತಿರ ಕಾನೂನುಬಾಹಿರವಾಗಿ ಗಾಂಜಾ ಹಾಗೂ ಚರಸ್ ಮಾರಾಟ ಮಾಡುತ್ತಿದ್ದ ಪೆಡ್ಲರ್ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಜನ್ನತನಗರ ನಿವಾಸಿ ಸೊಹೇಲ್ ಮಕಾಂದಾರ (24) ಬಂಧಿತ ಆರೋಪಿ.
ಕಾರ್ಯಾಚರಣೆ ಹಾಗೂ ವಶಪಡಿಸಿಕೊಂಡ ಸ್ವತ್ತು:
ಸಿಸಿಬಿ ವಿಭಾಗದ ಎಸಿಪಿ ಶ್ರೀ ಶಿವಪ್ರಕಾಶ್ ನಾಯಕ್ ಹಾಗೂ ಪಿಐ ಶ್ರೀ ರಮೇಶ ಕಾಂಬಳೆ ಅವರ ನೇತೃತ್ವದ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಬಂದಿತನಿಂದ:
₹39,400 ಮೌಲ್ಯದ 755 ಗ್ರಾಂ (197 ಪ್ಯಾಕೆಟ್) ಗಾಂಜಾ
23 ಗ್ರಾಂ ಚರಸ್ (7 ಚೀಟಿ)
ಬಜಾಜ್ ಪ್ಲಾಟಿನಾ 110 ಬೈಕ್
ಸೇರಿದಂತೆ ಒಟ್ಟು ₹58,400 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಆರೋಪಿಗಳು ಪರಾರಿ:
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ‘ಪಂಪು @ ಮಹಮ್ಮದ್ ಇರಾನಿ’ ಹಾಗೂ ‘ಪುರಖಾನ ಬೇಪಾರಿ’ ಎಂಬ ಇಬ್ಬರು ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ & ಸಿಸಿಬಿ ತಂಡಕ್ಕೆ ಶ್ಲಾಘನೆ:
ಡ್ರಗ್ಸ್ ಮಾರಾಟ ಅಥವಾ ಸೇವನೆಯಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ‘112’ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ