Share News

ವಿರಾಜಪೇಟೆ: ತಾಲೂಕಿನ ‘ಹಿಲ್ ಬ್ಲೂಮ್’ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನಗತ್ಯ ಪರೀಕ್ಷೆ ನಡೆಸಿ, ಓವರ್ ಡೋಸ್ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

​ಸಾಮಾನ್ಯ ನೋವಿಗೂ ಇಸಿಜಿ, ರಕ್ತ ಪರೀಕ್ಷೆ ಕಡ್ಡಾಯ!

ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಡ್ರಿಪ್ಸ್ ಹಾಕುವುದು ಕಡ್ಡಾಯ ಎಂಬಂತಾಗಿದೆ. ಸಣ್ಣಪುಟ್ಟ ಬೆರಳು, ಕೈ-ಕಾಲು ಅಥವಾ ಸೊಂಟ ನೋವಿಗೆ ಬರುವವರಿಗೂ ಇಸಿಜಿ, ರಕ್ತ ಹಾಗೂ ಮೂತ್ರ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿ ಹಣ ಸುಲಿಗೆ ಮಾಡಲಾಗುತ್ತಿದೆ. ಎದೆನೋವೆಂದು ಬಂದವರನ್ನು ಸುಮ್ಮನೆ ಗಂಟೆಗಟ್ಟಲೆ ಆಸ್ಪತ್ರೆಯಲ್ಲಿಟ್ಟುಕೊಂಡು, ಕೊನೆಗೆ ಮೈಸೂರಿಗೆ ಕಳುಹಿಸುತ್ತಾರೆ; ಆದರೆ ಅಲ್ಲಿ ತೆರಳಿದ ಕೆಲ ರೋಗಿಗಳು ಸಾವನ್ನಪ್ಪಿದ ಉದಾಹರಣೆಗಳಿವೆ ಎಂಬ ಆರೋಪ ಕೇಳಿಬಂದಿದೆ.

​ನ್ಯಾಯಾಧೀಶರಿಗೇ ಓವರ್ ಡೋಸ್ ಮಾತ್ರೆ!

ಇತ್ತೀಚೆಗೆ ಸಾಮಾನ್ಯ ಜ್ವರ/ಮೈ ಬಿಸಿಯಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ್ದ ವಿರಾಜಪೇಟೆಯ ನ್ಯಾಯಾಧೀಶರೊಬ್ಬರಿಗೆ ಇಲ್ಲಿನ ವೈದ್ಯರು ಓವರ್ ಡೋಸ್ ಮಾತ್ರೆಗಳನ್ನು ನೀಡಿದ್ದರು. ಮಾತ್ರೆ ಸೇವಿಸಿದ ಬಳಿಕ ನ್ಯಾಯಾಧೀಶರು ತೀವ್ರ ನಿತ್ರಾಣಗೊಂಡಿದ್ದು, ತಕ್ಷಣವೇ ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ. ವಿಶ್ವನಾಥ್ ಸಿಂಪಿ ಅವರ ಬಳಿ ತೆರಳಿದ್ದಾರೆ. ಆಸ್ಪತ್ರೆ ನೀಡಿದ್ದ ಮಾತ್ರೆಗಳನ್ನು ಪರಿಶೀಲಿಸಿದ ವೈದ್ಯರು, ಇವು ವೃದ್ಧರಿಗೆ ನೀಡುವ ಅಧಿಕ ಸಾಮರ್ಥ್ಯದ ಮಾತ್ರೆಗಳು ಎಂದು ತಿಳಿಸಿ ತಕ್ಷಣವೇ ಪರ್ಯಾಯ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.

​ಇಲ್ಲದ ಹೃದಯಾಘಾತದ ಸುಳ್ಳು ವರದಿ:

ಮತ್ತೊಂದು ಪ್ರಕರಣದಲ್ಲಿ, ಸ್ಥಳೀಯ ವ್ಯಕ್ತಿಯೊಬ್ಬರು ಇಸಿಜಿ ಮಾಡಿಸಿದಾಗ ಅಲ್ಲಿನ ಮಹಿಳಾ ವೈದ್ಯರು ಅವರಿಗೆ ‘ಹೃದಯಾಘಾತವಾಗಿದೆ’ ಎಂದು ಹೆದರಿಸಿದ್ದರು. ಆತಂಕಗೊಂಡ ಆ ವ್ಯಕ್ತಿ ಮೈಸೂರಿನ ತಜ್ಞ ವೈದ್ಯರ ಬಳಿ ತೆರಳಿ ತಪಾಸಣೆಗೊಳಪಟ್ಟಾಗ ಯಾವುದೇ ಹೃದಯಾಘಾತ ಸಂಭವಿಸಿಲ್ಲ ಎಂಬ ಸತ್ಯ ಬಯಲಾಗಿದೆ.

​ಅಧಿಕಾರಿಗಳ ಕ್ರಮಕ್ಕೆ ಒತ್ತಾಯ:

ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಕನಿಷ್ಠ ₹1,000 ದಿಂದ ₹10,000 ಕ್ಕೂ ಹೆಚ್ಚು ಬಿಲ್ ಮಾಡಿ ಸುಲಿಗೆ ಮಾಡಲಾಗುತ್ತಿದೆ. ಇಲ್ಲಿನ ವೈದ್ಯರ ಅರ್ಹತೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿರುವ ಸ್ಥಳೀಯರು, ಬಡ ರೋಗಿಗಳ ಜೀವದ ಜೊತೆ ಆಟವಾಡುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕಟುವಾಗಿ ಒತ್ತಾಯಿಸಿದ್ದಾರೆ.

 


Share News