ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹70,000 ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಚಿಕ್ಕ ಆಡುಗೋಡಿಯ ನಿವಾಸಿಯೊಬ್ಬರು ಮೇ 29 ರಂದು ತಮ್ಮ ಮನೆಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದ್ದ ಕುರಿತು ಮೇ 30 ರಂದು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸೆಪ್ಟೆಂಬರ್ 11 ರಂದು ಬೊಮ್ಮನಹಳ್ಳಿ ಬಸ್ ನಿಲ್ದಾಣದ ಬಳಿ ಕಳುವಾಗಿದ್ದ ಬೈಕ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆ ವೇಳೆ ಆರೋಪಿಯು ಈ ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಮತ್ತಷ್ಟು ವಾಹನಗಳನ್ನು ಕದ್ದಿರುವುದಾಗಿ ಬಾಯಿಬಿಟ್ಟಿದ್ದ.
ಸಿಲ್ಕ್ ಬೋರ್ಡ್ ಬಳಿ ಬೈಕ್‌ಗಳು ಪತ್ತೆ:
ಆರೋಪಿ ನೀಡಿದ ಸುಳಿವು ಆಧರಿಸಿ ಸೆಪ್ಟೆಂಬರ್ 12 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು, ಮಡಿವಾಳದ ಸಿಲ್ಕ್ ಬೋರ್ಡ್ ಮೋರಿ ಬಳಿ ಮಾರಾಟಕ್ಕೆಂದು ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತನಿಂದ ಮಡಿವಾಳ ಠಾಣೆಯ 2, ತಿಲಕ್ ನಗರ ಹಾಗೂ ಜೆ.ಪಿ. ನಗರ ಪೊಲೀಸ್ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 4 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಜಪ್ತಿಯಾದ ವಾಹನಗಳ ಒಟ್ಟು ಮೌಲ್ಯ ಸುಮಾರು 70 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸದರಿ ಆರೋಪಿಯನ್ನು ಸೆಪ್ಟೆಂಬರ್ 12 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಸೂಕ್ತ ಮಾರ್ಗದರ್ಶನ ನೀಡಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಪೋಲಿಸ್ ತಂಡದ ಕಾರ್ಯಾಚರಣೆ:
ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಉಪ ವಿಭಾಗದ ಎಸಿಪಿ ವಾಸುದೇವ್ ವಿ.ಕೆ. ನೇತೃತ್ವದಲ್ಲಿ, ಮಡಿವಾಳ ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್. ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
Arakshakara Times Media
Related posts
