ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವೊಂದನ್ನು ಯಶಸ್ವಿಯಾಗಿ ಭೇದಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ನರ್ಸಿಂಗ್ ಸೇವೆಯಲ್ಲಿದ್ದ ಆರೋಪಿಯನ್ನು ಬಂಧಿಸಿ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಸೆಪ್ಟೆಂಬರ್ 27ರಂದು ಸಂತ್ರಸ್ತರು ತಮ್ಮ ಮನೆಯಲ್ಲಿದ್ದ 163 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ನಗದು ಕಳುವಾಗಿರುವ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಪರಿಗಣಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಎಂ.ವಿ. ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಸಿಸಿಟಿವಿ ಆಧಾರದಲ್ಲಿ ಆರೋಪಿ ಸೆರೆ:
ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ನೇತೃತ್ವದ ಪೊಲೀಸರ ತಂಡವು ಕೃತ್ಯ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಸಬಾ ಹೋಬಳಿಯ ಅರಳಮಲ್ಲಿಗೆ ಗ್ರಾಮದ ನಿವಾಸಿ, ನರ್ಸಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಭದ್ರಪ್ಪ ಬಸಪ್ಪ ಹಡಪದ (30) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
₹25 ಲಕ್ಷ ಮೌಲ್ಯದ ಮಾಲು ಜಪ್ತಿ:
ಬಂಧಿತ ಆರೋಪಿಯಿಂದ 45 ಗ್ರಾಂ ತೂಕದ ಅವಲಕ್ಕಿ ಚೈನ್, 62 ಗ್ರಾಂ ತೂಕದ ಮಾಂಗಲ್ಯ ಚೈನ್, 55 ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳು ಹಾಗೂ ₹25,000 ನಗದು ಸೇರಿದಂತೆ ಒಟ್ಟು 163 ಗ್ರಾಂ ಚಿನ್ನಾಭರಣ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಭೇದಿಸುವಲ್ಲಿ ಯಶಸ್ವಿಯಾದ ಪಿಎಸ್ಐಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Arakshakara Times Media
Related posts
