ಬೆಂಗಳೂರು: ದೇವಸ್ಥಾನಗಳನ್ನೇ ಪ್ರಮುಖ ಗುರಿಯಾಗಿಸಿಕೊಂಡು ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ದೇವತಾ ವಿಗ್ರಹಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬನ್ನೇರುಘಟ್ಟ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳು ನಡೆದಿದ್ದು, ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಕಳವು ಮಾಡಲಾಗಿದ್ದ ವಿಗ್ರಹಗಳು ಹಾಗೂ ಇತರ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ಬಂಧಿತ ಆರೋಪಿಗಳು ತಲಘಟ್ಟಪುರ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದೇವಸ್ಥಾನಗಳ ಬೀಗ ಮುರಿದು ಕೈಚಳಕ ತೋರುತ್ತಿದ್ದರು. ಈ ಕಳ್ಳರು ಕೇವಲ ದೇವಸ್ಥಾನಗಳನ್ನಷ್ಟೇ ಅಲ್ಲದೆ, ನಿರ್ಮಾಣ ಹಂತದ ಕಟ್ಟಡಗಳಿಗೂ ನುಗ್ಗಿ ಅಲ್ಲಿನ ದುಬಾರಿ ಯಂತ್ರೋಪಕರಣಗಳನ್ನು (Machines) ಕೂಡ ಕಳವು ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ವಶಪಡಿಸಿಕೊಂಡ ಸೊತ್ತುಗಳು:
ಆರೋಪಿಗಳಿಂದ ದೇವಸ್ಥಾನದಲ್ಲಿದ್ದ ಗಣೇಶ, ಆಂಜನೇಯ, ಲಕ್ಷ್ಮೀ ಹಾಗೂ ನಾಗರ ವಿಗ್ರಹಗಳು ಸೇರಿದಂತೆ ಒಟ್ಟು ನಾಲ್ಕು ಪವಿತ್ರ ವಿಗ್ರಹಗಳನ್ನು ಹಾಗೂ ಕಳ್ಳತನ ಮಾಡಲಾಗಿದ್ದ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವಸ್ಥಾನಗಳಲ್ಲಿ ವಿಗ್ರಹಗಳು ಕಳುವಾಗುತ್ತಿದ್ದಂತೆ ಸಾರ್ವಜನಿಕವಾಗಿ ಮತ್ತು ಧಾರ್ಮಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ.

Arakshakara Times Media
Related posts
