ಬೆಂಗಳೂರು: ಸಣ್ಣ ರಸ್ತೆ ಗಲಾಟೆಯ ವಿಚಾರಕ್ಕೆ ಯುವಕನೋರ್ವನ ಮೇಲೆ ಕ್ರೂರವಾಗಿ ಕಾರು ಹರಿಸಿ ಹತ್ಯೆಗೈದ ಭೀಕರ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಕೊಲೆಯಾದ ದುರದೃಷ್ಟಕರ ಯುವಕ. ಕೃತ್ಯ ಎಸಗಿದ ಅಜಯ್, ಸಾಜಲ್ ಮತ್ತು ಬಿಜೋನ್ ರಾಯ್ ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ:
ದಸರಾ ಹಬ್ಬದ ನಿಮಿತ್ತ ಬಿಹಾರ ಮೂಲದ ನಿತೀಶ್ ಮುಖಿಯಾ ಎಂಬಾತ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪ್ರಗತಿನಗರದಲ್ಲಿದ್ದ ತನ್ನ ಅಣ್ಣನ ಮನೆಗೆ ಬಂದಿದ್ದ. ಅಕ್ಟೋಬರ್ 21ರ ರಾತ್ರಿ ಊಟ ಮುಗಿಸಿ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರಿನ ಚಾಲಕನಿಗೆ ವೇಗ ಕಡಿಮೆ ಮಾಡುವಂತೆ ನಿತೀಶ್ ಮನವಿ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಕಾರಿನಲ್ಲಿದ್ದ ಕಿರಾತಕರು “ನಮ್ಮ ಕಾರಿಗೇ ಕೈ ತೋರಿಸುತ್ತೀಯಾ?” ಎಂದು ನಿತೀಶ್ ಮೇಲೆ ಹಲ್ಲೆ ನಡೆಸಿ ತೆರಳಿದ್ದರು.
ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ಕಾರಿನಲ್ಲಿ ವಾಪಸ್ ಬಂದ ದುಷ್ಕರ್ಮಿಗಳು ಮತ್ತೆ ನಿತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ನೆರವಿಗೆ ಬಂದ ಸ್ನೇಹಿತನ ಮೇಲೆಯೇ ಕಾರು ಹರಿಸಿದರು!
ಹಲ್ಲೆಯಿಂದ ಗಾಯಗೊಂಡಿದ್ದ ನಿತೀಶ್, ಸಮೀಪದ ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ರಂಜಿತ್ ಸಾಹು ಹಾಗೂ ಇತರ ಸ್ನೇಹಿತರಿಗೆ ಕರೆ ಮಾಡಿ ನೆರವು ಕೋರಿದ್ದಾನೆ. ವಿಷಯ ತಿಳಿದು ಸ್ನೇಹಿತರೆಲ್ಲರೂ ಸ್ಥಳಕ್ಕೆ ಧಾವಿಸಿದ್ದಾರೆ. ಯುವಕರ ಗುಂಪು ಇರುವುದನ್ನು ಕಂಡ ದುಷ್ಕರ್ಮಿಗಳು ಅವರ ಮೇಲೆಯೇ ನೇರವಾಗಿ ಕಾರು ಹರಿಸಲು ಯತ್ನಿಸಿದ್ದಾರೆ.
ಈ ವೇಳೆ ರಂಜಿತ್ ಕುಮಾರ್ಗೆ ತೀವ್ರವಾಗಿ ಡಿಕ್ಕಿ ಹೊಡೆದ ದುಷ್ಟರು, ಆತನ ಕಾಲುಗಳ ಮೇಲೆ ಕಾರು ಚಲಾಯಿಸಿ, ಸುಮಾರು 100 ಮೀಟರ್ಗಳಷ್ಟು ದೂರ ಹೊಸೂರು ಸರ್ವೀಸ್ ರಸ್ತೆಯಲ್ಲಿ ಎಳೆದೊಯ್ದು ಪರಾರಿಯಾಗಿದ್ದಾರೆ.
ಚಿಕಿತ್ಸೆ ಫಲಿಸದೆ ಯುವಕ ಸಾವು – ಸಿಸಿಟಿವಿ ಆಧರಿಸಿ ಆರೋಪಿಗಳ ಬಂಧನ:
ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು, ದೇಹದ ಹಲವು ಮೂಳೆಗಳು ಮುರಿದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರಂಜಿತ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ದೂರುದಾರ ನಿತೀಶ್ಗೂ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆದ ಸ್ಥಳದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಕಾರ್ಯಚರಣೆ ನಡೆಸಿ ಕೃತ್ಯ ಎಸಗಿದ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Arakshakara Times Media
Related posts
