ಅಕ್ರಮ ಔಷಧ ಮಾರಾಟಕ್ಕೆ ಬ್ರೇಕ್ ಹಾಕಲು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂದು ಬೇಗೂರು ಪೊಲೀಸ್ ಠಾಣೆಯ ವತಿಯಿಂದ ಔಷಧ ನಿಯಂತ್ರಣ ಇಲಾಖೆಯ (Drugs Control Department) ಅಧಿಕಾರಿಗಳೊಂದಿಗೆ ಜಂಟಿಯಾಗಿ ಮೆಡಿಕಲ್ ಶಾಪ್ಗಳ ಮೇಲೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ವೈದ್ಯಕೀಯ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿದ ಜಂಟಿ ಅಧಿಕಾರಿಗಳ ತಂಡ, ಔಷಧಗಳ ದಾಸ್ತಾನು, ಮಾರಾಟದ ರಸೀದಿಗಳು ಹಾಗೂ ನಿಷೇಧಿತ ಅಥವಾ ವೈದ್ಯರ ಚೀಟಿ (Prescription) ಇಲ್ಲದೆ ನೀಡಲಾಗುವ ಮಾತ್ರೆಗಳ ಕುರಿತು ಕಟ್ಟುನಿಟ್ಟಿನ ಪರಿಶೀಲನೆ ನಡೆಸಿತು.
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಲವು ಮಾತ್ರೆ ಹಾಗೂ ಸಿರಪ್ಗಳನ್ನು ಮಾದಕ ವಸ್ತುವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ಆಯೋಜಿಸಲಾಗಿತ್ತು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಔಷಧಗಳನ್ನು ಮಾರಾಟ ಮಾಡಬಾರದು ಮತ್ತು ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮೆಡಿಕಲ್ ಶಾಪ್ ಮಾಲೀಕರಿಗೆ ಅಧಿಕಾರಿಗಳು ಕಠಿಣ ಎಚ್ಚರಿಕೆ ನೀಡಿದರು.
ಸೀಮಿತವಾಗದೆ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಔಷಧ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಅಥವಾ ನಿಯಮ ಬಾಹಿರವಾಗಿ ವ್ಯವಹಾರ ನಡೆಸುವ ಅಂಗಡಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಪರವಾನಗಿ ರದ್ದು ಸೇರಿದಂತೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳ ತಂಡ ಎಚ್ಚರಿಸಿದೆ.
