Share News

ಕಾರುಗಳ ನಕಲಿ ಆರ್‌ಸಿ (RC), ಬ್ಯಾಂಕ್ ಎನ್‌ಒಸಿ (NOC) ಹಾಗೂ ಸರ್ಕಾರಿ ಅಧಿಕಾರಿಗಳ ನಕಲಿ ಸೀಲ್‌ಗಳನ್ನು ಬಳಸಿ ಸಾರ್ವಜನಿಕರಿಗೆ ವಂಚಿಸಿ ಕಾರು ಮಾರಾಟ ಮಾಡುತ್ತಿದ್ದ ಖತರ್ನಾಕ್ ಜಾಲವನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬರೋಬ್ಬರಿ ₹2 ಕೋಟಿ ಮೌಲ್ಯದ 10 ಕಾರುಗಳು ಹಾಗೂ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

​ಪ್ರಕರಣದ ಹಿನ್ನೆಲೆ:

ವಿಲ್ಸನ್ ಗಾರ್ಡನ್‌ನ ಉಮರ್ ನಗರ ನಿವಾಸಿಯೊಬ್ಬರಿಗೆ ಕಾರ್ ಡೀಲರ್ ಒಬ್ಬ ಪರಿಚಯವಾಗಿದ್ದು, ತನ್ನ ಬಳಿ ಉತ್ತಮ ಸ್ಥಿತಿಯಲ್ಲಿರುವ ‘ಟೊಯೋಟಾ ಫಾರ್ಚುನರ್’ ಕಾರು ಇದೆ ಎಂದು ವಾಟ್ಸಾಪ್‌ನಲ್ಲಿ ಫೋಟೋ ಕಳುಹಿಸಿದ್ದನು. ಬಳಿಕ ಕಾರ್ ತೋರಿಸುವುದಾಗಿ ಹೇಳಿ ₹20,000 ಅಡ್ವಾನ್ಸ್ ಪಡೆದಿದ್ದನು. ಸೆಪ್ಟೆಂಬರ್ 3, 2026ರಂದು ವಿಲ್ಸನ್ ಗಾರ್ಡನ್ ಪಾರ್ಕ್ ಬಳಿ ಕಾರು ತಂದು ವ್ಯವಹರಿಸಿ, ನಕಲಿ ಆರ್‌ಸಿ ಕಾರ್ಡ್ ನೀಡಿ ವಂಚಿಸಿದ್ದನು. ಸಂತ್ರಸ್ತರು ಆರ್‌ಸಿ ಕಾರ್ಡ್ ಪರಿಶೀಲಿಸಿದಾಗ ಅದು ನಕಲಿ ಎಂದು ಬೆಳಕಿಗೆ ಬಂದಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

​ಪೊಲೀಸ್ ಕಾರ್ಯಾಚರಣೆ ಹಾಗೂ ತನಿಖೆ:

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೆಪ್ಟೆಂಬರ್ 14, 2026ರಂದು ಕಾರ್ ಡೀಲರ್‌ನ ಸಹಚರನೊಬ್ಬನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಇಡೀ ವಂಚನೆ ಜಾಲ ಬಯಲಾಗಿದೆ. ಆರೋಪಿಗಳು ನಕಲಿ ಆರ್‌ಸಿ, ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳ ನಕಲಿ ಸೀಲ್‌ಗಳನ್ನು ತಯಾರಿಸಿ ಡೀಲರ್‌ಗಳ ಮೂಲಕ ಕಾರು ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ ನಕಲಿ ಆರ್‌ಸಿ ಕಾರ್ಡ್‌ಗಳು, ಪ್ರಿಂಟಿಂಗ್ ಯಂತ್ರ, ಸರ್ಕಾರಿ ಅಧಿಕಾರಿಗಳ ಸೀಲ್‌ಗಳು, ಸ್ಟಾಂಪ್ ಪೇಪರ್, ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಜಪ್ತಿ ಮಾಡಲಾಗಿತ್ತು.

​ಆರೋಪಿಯನ್ನು 9 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿಯನ್ನಾಧರಿಸಿ ಸೆಪ್ಟೆಂಬರ್ 21ರಂದು ಮತ್ತೋರ್ವ ಆರೋಪಿಯನ್ನು ಬಂಧಿಸಲಾಯಿತು. ಆತ ನೀಡಿದ ಸುಳಿವು ಆಧರಿಸಿ ಬಿ.ಟಿ.ಎಸ್ ರಸ್ತೆಯ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ 9 ಕಾರುಗಳು, 1 ದ್ವಿಚಕ್ರ ವಾಹನ ಹಾಗೂ ನಕಲಿ ಆರ್‌ಸಿಗಳನ್ನು ಜಪ್ತಿ ಮಾಡಲಾಯಿತು. ಸೆಪ್ಟೆಂಬರ್ 22ರಂದು ಡಬಲ್ ರೋಡ್ ಬಳಿ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ.

​₹2 ಕೋಟಿ ಮೌಲ್ಯದ ಸ್ವತ್ತು ಜಪ್ತಿ:

ಇಡೀ ಕಾರ್ಯಾಚರಣೆಯಲ್ಲಿ ಸಂತ್ರಸ್ತರ ಬಳಿಯಿದ್ದ ಫಾರ್ಚುನರ್ ಕಾರು ಸೇರಿದಂತೆ ಒಟ್ಟು 10 ಕಾರುಗಳು (ವಿವಿಧ ಮಾದರಿ) ಹಾಗೂ 1 ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ₹2,00,00,000 (ಎರಡು ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಪ್ರಮುಖ ಕಾರ್ ಡೀಲರ್ ಹಾಗೂ ಇತರ ಸಹಚರರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

​ಪೊಲೀಸ್ ತಂಡಕ್ಕೆ ಶ್ಲಾಘನೆ:

ಕೇಂದ್ರ ವಿಭಾಗದ ಡಿಸಿಪಿ ಶ್ರೀ ಅಕ್ಷಯ್ ಎಂ ಹಾಕೆ (ಐ.ಪಿ.ಎಸ್) ಹಾಗೂ ಹಲಸೂರುಗೇಟ್ ಉಪ ವಿಭಾಗದ ಎಸಿಪಿ ಶ್ರೀ ಸುಧೀರ್.ಎಸ್ ಅವರ ನೇರ ಮಾರ್ಗದರ್ಶನದಲ್ಲಿ, ವಿಲ್ಸನ್ ಗಾರ್ಡನ್ ಇನ್ಸ್‌ಪೆಕ್ಟರ್ ಶ್ರೀ ಪ್ರಕಾಶ್.ಕೆ ಮತ್ತು ಅವರ ಅಧಿಕಾರಿ-ಸಿಬ್ಬಂದಿಗಳ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.


Share News