Share News

ಬೆಂಗಳೂರು : ಮನೆಯ ಕಿಟಕಿ ಕಡ್ಡಿ ಮುರಿದು ಕೋಟ್ಯಂತರ ಮೌಲ್ಯದ ನಗನಾಣ್ಯ ದೋಚಿದ್ದ ಹೊರರಾಜ್ಯದ ಪ್ರಮುಖ ಕಳ್ಳನೊಬ್ಬನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 271 ಗ್ರಾಂ ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ ಒಂದು ಐಪ್ಯಾಡ್ ಸೇರಿದಂತೆ ಒಟ್ಟು ₹42 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಪ್ರಕರಣದ ಹಿನ್ನೆಲೆ:

ಆಗಸ್ಟ್ 31, 2026ರಂದು ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ನಿವಾಸಿಯೊಬ್ಬರು ತಮ್ಮ ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಮಲಗಿದ್ದರು. ಈ ವೇಳೆ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿದ್ದ ಕಳ್ಳರು, ಬೀರುವಿನಲ್ಲಿದ್ದ ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ ಐಪ್ಯಾಡ್‌ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ತರು ನೀಡಿದ ದೂರಿನನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

​ವಿಮಾನ ನಿಲ್ದಾಣದ ಬಳಿ ಮಿಂಚಿನ ಕಾರ್ಯಾಚರಣೆ:

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಾತ್ಮೀದಾರರಿಂದ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಸೆಪ್ಟೆಂಬರ್ 11, 2026ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಆತ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದನು.

​ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಸೊತ್ತುಗಳನ್ನು ಹೊಸೂರು ಮುಖ್ಯರಸ್ತೆಯ ‘ಬಡಾ ಮಕಾನ್’ ಸ್ಮಶಾನದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಬಾಂಚಿಸಿಟ್ಟಿರುವುದಾಗಿ ಮಾಹಿತಿ ನೀಡಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸೆಪ್ಟೆಂಬರ್ 14 ರಂದು ಸ್ಥಳಕ್ಕೆ ತೆರಳಿ ₹42 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 15 ರಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

​ಪೊಲೀಸ್ ತಂಡಕ್ಕೆ ಶ್ಲಾಘನೆ:

ಕೇಂದ್ರ ವಿಭಾಗದ ಡಿಸಿಪಿ ಶ್ರೀ ಅಕ್ಷಯ್ ಎಂ ಹಾಕಿ (ಐ.ಪಿ.ಎಸ್) ಹಾಗೂ ಹಲಸೂರುಗೇಟ್ ಉಪ ವಿಭಾಗದ ಎಸಿಪಿ ಶ್ರೀ ಸುಧೀರ್.ಎಸ್ ಅವರ ನೇರ ಮಾರ್ಗದರ್ಶನದಲ್ಲಿ, ವಿಲ್ಸನ್ ಗಾರ್ಡನ್ ಇನ್ಸ್‌ಪೆಕ್ಟರ್ ಶ್ರೀ ಪ್ರಕಾಶ್.ಕೆ ಮತ್ತು ಅವರ ಅಧಿಕಾರಿ-ಸಿಬ್ಬಂದಿಗಳ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿ ಕಳವು ಪ್ರಕರಣವನ್ನು ಬೇಧಿಸಿದೆ.


Share News