ಬೆಂಗಳೂರು: ರಾಜ್ಯದ ಅತ್ಯುನ್ನತ ಆಡಳಿತ ಕೇಂದ್ರ ಹಾಗೂ ಪ್ರಮುಖ ಐತಿಹಾಸಿಕ ಸೌಧವಾದ ವಿಧಾನಸೌಧವೇ ಬಾಂಬ್ ದಾಳಿಗೆ ಸಿಲುಕಿ ಸ್ಫೋಟಗೊಂಡಂತೆ ತಿರುಚಿದ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಯತ್ನಿಸಿದ ಆರೋಪಿಯೊಬ್ಬನನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಿಹಾರ ಮೂಲದ ಅಜರತ್ ಅಲಿ ಬಂಧಿತ ಆರೋಪಿ. ಈತ ಬೆಂಗಳೂರಿನ ಜೆ.ಸಿ. ರಸ್ತೆಯ ಪೈಪ್ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಆರೋಪಿ ಅಜರತ್ ಅಲಿ ವಿಧಾನಸೌಧದ ಮುಂಭಾಗದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದನು. ನಂತರ ಅದನ್ನು ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಎಡಿಟ್ ಮಾಡಿ, ವಿಧಾನಸೌಧವು ಭೀಕರವಾಗಿ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವಂತೆ ದೃಶ್ಯಗಳನ್ನು ಸೃಷ್ಟಿಸಿ ರೀಲ್ಸ್ ತಯಾರಿಸಿದ್ದನು. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಹಾಗೂ ಕಾನೂನು ಸುವರ್ವತೆಗೆ ಧಕ್ಕೆ ತರುವ ದುರ್ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಆತಂಕಕಾರಿ ಹಾಗೂ ಪ್ರಚೋದನಕಾರಿ ರೀಲ್ಸ್ನ ಜಾಡನ್ನು ಬೆನ್ನತ್ತಿದ ಬೆಂಗಳೂರು ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಯುವಕನ ಇರುವಿಕೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ವೇಳೆ, ತಾನೇ ಖುದ್ದಾಗಿ ಫೋಟೊ ಮತ್ತು ವಿಡಿಯೋವನ್ನು ಎಡಿಟ್ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಗಂಭೀರ ಕೃತ್ಯಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈತನ ಹಿಂದೆ ಬೇರೆ ಯಾರಾದರೂ ಕೈವಾಡವಿದೆಯೇ ಅಥವಾ ಇದರ ಹಿಂದೆ ಯಾವುದೇ ದುರುದ್ದೇಶವಿತ್ತೇ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Arakshakara Times Media
Related posts
