ಉಡುಪಿ / ಹಿರಿಯಡ್ಕ: ಮಗ ಮೃತಪಟ್ಟಿದ್ದ ದುಃಖದಲ್ಲಿದ್ದ ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ್ದ ಖದೀಮನನ್ನು ಹಿರಿಯಡ್ಕ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ನಿವಾಸಿ, ವೃತ್ತಿಯಲ್ಲಿ ಹೋಮ್ ನರ್ಸ್ ಆಗಿರುವ ಉಮೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ. ಬಂಧಿತನಿಂದ ₹1.85 ಲಕ್ಷ ಮೌಲ್ಯದ 15 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಸಾಂತ್ವನ ಹೇಳುವ ನೆಪದಲ್ಲಿ ಬಂದು ಬುರಿಡಿ!
ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ (75) ಎಂಬವರ ಮನೆಯಲ್ಲಿ ಸೆಪ್ಟೆಂಬರ್ 13ರಂದು ಈ ಕಳವು ನಡೆದಿತ್ತು. ಬೆಳಿಗ್ಗೆ ಮನೆಗೆ ಬಂದಿದ್ದ ಆರೋಪಿ ಉಮೇಶ್ ಶೆಟ್ಟಿ, ಬಾಬಿ ಅವರ ಮಗ ದಿನೇಶ್ ಮೃತಪಟ್ಟಿರುವ ವಿಷಯ ತನಗೆ ತಿಳಿದಿದೆ ಎಂದು ಸಾಂತ್ವನ ಹೇಳಿದ್ದನು. ಅಷ್ಟೇ ಅಲ್ಲದೆ, ಮರುದಿನ ಮನೆಗೆ ವಿಮಾ ಅಧಿಕಾರಿಗಳು ಬರಲಿದ್ದು, ಅವರಿಂದ ಹೆಚ್ಚಿನ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ನಂಬಿಕೆ ಗಳಿಸಿದ್ದನು.
ಅಂದು ಮಧ್ಯಾಹ್ನ ಬಾಬಿ ಹಾಂಡ್ತಿ ಅವರು ಕುತ್ತಿಗೆಯಲ್ಲಿದ್ದ ಸುಮಾರು ಎರಡು ಪವನ್ ಚಿನ್ನದ ಸರವನ್ನು ಕಳಚಿ ಮನೆಯೊಳಗಿನ ಮೇಜಿನ ಮೇಲಿಟ್ಟಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಮತ್ತೆ ಬಂದ ಆರೋಪಿ, ವೃದ್ಧೆಯೊಂದಿಗೆ ಮಾತುಕತೆ ನಡೆಸಿ ಮನೆಯ ಜಗುಲಿಯಲ್ಲಿ ಕುಳಿತಿದ್ದನು. ಈ ವೇಳೆ ಬಾಬಿ ಅವರು ತೋಟಕ್ಕೆ ತೆರಳಿ ದನವನ್ನು ಕೊಟ್ಟಿಗೆಗೆ ಕಟ್ಟಿ ವಾಪಸ್ ಬರುವಷ್ಟರಲ್ಲಿ ಆರೋಪಿ ಕಾಲ್ತೆಗೆದಿದ್ದನು. ಮೇಜಿನ ಮೇಲಿಟ್ಟಿದ್ದ ಚಿನ್ನದ ಸರವೂ ನಾಪತ್ತೆಯಾಗಿತ್ತು.
ಈ ಸಂಬಂಧ ಸೆಪ್ಟೆಂಬರ್ 14ರಂದು ಬಾಬಿ ಹಾಂಡ್ತಿ ಅವರ ಪುತ್ರ ಶಂಕರ ಕುಲಾಲ್ (53) ನೀಡಿದ ದೂರಿನನ್ವಯ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿತ್ತು.
60 ಸಿಸಿಟಿವಿ ಪರಿಶೀಲಿಸಿ ಆರೋಪಿ ಕಂಬಿ ಹಿಂದೆ!
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಸುಮಾರು 50ರಿಂದ 60 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿ, ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಅಕ್ಟೋಬರ್ 23ರಂದು ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿದ್ದ ಆರೋಪಿಯ ಮನೆ ಬಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸ್ ಪಡೆ:
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ನೇತೃತ್ವದಲ್ಲಿ, ಹಿರಿಯಡ್ಕ ಪಿಎಸ್ಐ ಪುನೀತ್ ಕುಮಾರ್ ಬಿ.ಇ. (ಕಾ.ಸು.) ಮತ್ತು ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪೂಜಾರಿ ಹಾಗೂ ಮಹಾಂತೇಶ್ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Arakshakara Times Media
Related posts
