ಚಿಂತಾಮಣಿ: ತಾನು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಅಂಗಡಿಯಲ್ಲೇ ಗ್ರಾಹಕರಿಗೆ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಚಿಂತಾಮಣಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಿಂತಾಮಣಿ ತಾಲ್ಲೂಕಿನ ಊಲವಾಡಿ ಗ್ರಾಮದ ಕಲ್ಯಾಣ್ ಕುಮಾರ್ @ ಬರುಗಲು (27) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು ₹8.5 ಲಕ್ಷ ಮೌಲ್ಯದ 4 ಕೆ.ಜಿ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ:
ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಸಿ.ಆರ್ ಕಾಂಪ್ಲೆಕ್ಸ್ನಲ್ಲಿರುವ ‘ಶ್ರೀ ಊಲವಾಡಿ ಕೃಷ್ಣಪ್ಪ ಜೂವೆಲರ್ಸ್’ ಅಂಗಡಿಯಲ್ಲಿ ಆರೋಪಿ ಕಲ್ಯಾಣ್ ಕುಮಾರ್ ಬೆಳ್ಳಿಯ ಆಭರಣಗಳ ಕೌಂಟರ್ ನೋಡಿಕೊಳ್ಳುತ್ತಿದ್ದನು. 2025ನೇ ಸಾಲಿನಿಂದಲೂ ಗ್ರಾಹಕರಿಗೆ ಆಭರಣ ತೋರಿಸಿ, ಕಣ್ಣುತಪ್ಪಿಸಿ ಅವುಗಳನ್ನು ತನ್ನ ಜೇಬಿನಲ್ಲಿಟ್ಟುಕೊಂಡು ಸದ್ದಿಲ್ಲದೆ ಕಳವು ಮಾಡುತ್ತಿದ್ದನು.
ಒಟ್ಟು 4 ಕೆ.ಜಿ 500 ಗ್ರಾಂ ತೂಕದ, ಅಂದಾಜು ₹9,50,000 ಮೌಲ್ಯದ ವಿವಿಧ ರೀತಿಯ ಬೆಳ್ಳಿಯ ಒಡವೆಗಳನ್ನು ಈತ ಕಳವು ಮಾಡಿದ್ದಾಗಿ ಅಂಗಡಿ ಮಾಲೀಕ ಸುನೀಲ್ ಕುಮಾರ್ ವಿ.ಕೆ. ಅವರು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮೊ.ಸಂ 163/2026, ಕಲಂ 306 ಬಿ.ಎನ್.ಎಸ್-2023 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪೊಲೀಸರ ಕಾರ್ಯಾಚರಣೆ ಹಾಗೂ ಜಪ್ತಿ:
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀಮತಿ ಪದ್ಮಣಿ ಸಾಹೋ, ಐ.ಪಿ.ಎಸ್, ಎಎಸ್ಪಿ ಜಗನ್ನಾಥ್ ರೈ, ಹಾಗೂ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಎನ್. ರಘು ಅವರ ಮಾರ್ಗದರ್ಶನದಂತೆ, ಚಿಂತಾಮಣಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀಜಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಖಚಿತ ಬಾತ್ಮಿ ಆಧರಿಸಿ ಅಕ್ಟೋಬರ್ 20, 2026 ರಂದು ಆರೋಪಿ ಕಲ್ಯಾಣ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯ ಮನೆಯಲ್ಲಿ ಬಚ್ಚಿಡಲಾಗಿದ್ದ ಸುಮಾರು ₹8.5 ಲಕ್ಷ ಮೌಲ್ಯದ 4 ಕೆ.ಜಿ ತೂಕದ ಬೆಳ್ಳಿ ಆಭರಣಗಳನ್ನು (ಕಾಲುಚೈನುಗಳು, ಖಡ್ಡು, ಉಡುದಾರ, ಬ್ರಾಸ್ಲೈಟ್, ಕಾಲುಂಗುರಗಳು, ಹುಕ್ಸ್ ಮತ್ತು ಕೊಂಡಿಗಳು ಇತ್ಯಾದಿ) ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:
ಈ ತ್ವರಿತ ಪತ್ತೆ ಕಾರ್ಯದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀಜಿಕುಮಾರ್, ಪಿ.ಎಸ್.ಐ ಪ್ರಕಾಶ್ ಜೆ. ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಶಂಕರಪ್ಪ ಕೆ.ಸಿ., ಹೆಚ್.ಸಿ. ವೆಂಕಟರವಣ, ಹೆಚ್.ಸಿ. ವೀಜಿಕುಮಾರ್, ಪಿ.ಸಿ. ಲೋಕೇಶ್, ಪಿ.ಸಿ. ಅಂಜನ್ರೆಡ್ಡಿ, ಪಿ.ಸಿ. ಅಂಬರೀಶ ಹಾಗೂ ಎ.ಪಿ.ಸಿ. ಸತೀಶ್ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
Arakshakara Times Media
Related posts
