ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಹಾಗೂ ಇಂತಹ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಸಮರ ಸಾರಿವೆ.
ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಸರಣಿ ದಾಳಿಗಳನ್ನು ನಡೆಸಿರುವ ಜಂಟಿ ಪಡೆಯು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಪಡಿಸಿಕೊಂಡಿದೆ.
ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ:
ಹಾವೇರಿ ನಗರ & ಗ್ರಾಮೀಣ: ತಾರಾ ಪ್ಲಾಜಾ, ಶಾಂತಿನಗರ 3ನೇ ಕ್ರಾಸ್ ಬದಿ, ದೇವಿಹೊಸೂರು ಹಾಗೂ ಕೇತನ ಭಾಗದ ಅಂಗಡಿಗಳ ಮುಂದೆ ಸಾರ್ವಜನಿಕ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಗುತ್ತಲ & ಬ್ಯಾಡಗಿ: ತೆರೆದಹಳ್ಳಿ, ಬೂದಗಟ್ಟಿ ಹಾಗೂ ಬ್ಯಾಡಗಿಯ ಬಿಸಲಹಳ್ಳಿ, ಅಗಸನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆಯಾಗಿದ್ದು, ಎರಡೂ ಕಡೆ ತಲಾ 1,800 ಮಿ.ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ರಾಣೇಬೆನ್ನೂರು & ಇತರ ಭಾಗಗಳು: ಕಜ್ಜರಿ ಗ್ರಾಮದ ಭೀಮ್ ನಗರ–ದೇವರಗುಡ್ಡ ರಸ್ತೆ, ಕುಮಾರಪಟ್ಟಣಂ ವ್ಯಾಪ್ತಿಯ ಮಾಕನೂರ, ಹಲಗೇರಿಯ ಮೇಣಸಿನಹಾಳ, ರಟ್ಟೀಹಳ್ಳಿಯ ಬೈರಂಪಾದ ಹಾಗೂ ಶಿಗ್ಗಾಂವಿ ವ್ಯಾಪ್ತಿಯ ವನಹಳ್ಳಿ ಕ್ರಾಸ್ ಬಳಿ ಅಕ್ರಮ ಮದ್ಯದ ವಿರುದ್ಧ ಚಾಟಿ ಬೀಸಲಾಗಿದೆ.
ಬಂಕಾಪುರ ಠಾಣೆ: ಹುನಗುಂದ ಗ್ರಾಮದ ಬೀದಿ ಅಂಗಡಿಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಕುಡಿಯಲು ಅವಕಾಶ ಕಲ್ಪಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಅಬಕಾರಿ ಇಲಾಖೆಯ ಮೂಲ ಜಾಲ ಪತ್ತೆಗೆ ಆಗ್ರಹ:
ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಈ ಜಂಟಿ ಕಾರ್ಯಾಚರಣೆ ಶ್ಲಾಘನೀಯವಾಗಿದ್ದರೂ, ಕೇವಲ ಸಣ್ಣಪುಟ್ಟ ಅಂಗಡಿಗಳ ಮೇಲೆ ದಾಳಿ ನಡೆಸುವುದಕ್ಕೆ ಸೀಮಿತವಾಗಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಅಕ್ರಮ ಮದ್ಯ ಎಲ್ಲಿಂದ ಪೂರೈಕೆಯಾಗುತ್ತಿದೆ? ಇದರ ಹಿಂದಿರುವ ಮುಖ್ಯ ಜಾಲ ಯಾವುದು? ಎಂಬುದನ್ನು ಮೂಲದಲ್ಲೇ ಪತ್ತೆಹಚ್ಚಿ ಶಾಶ್ವತ ಕಡಿವಾಣ ಹಾಕಲು ಅಬಕಾರಿ ಇಲಾಖೆ ಇನ್ನಷ್ಟು ಚುರುಕಾಗಬೇಕಿದೆ.
”ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಅಕ್ರಮ ಮದ್ಯ ಸಾಗಣೆ ಮತ್ತು ಪೂರೈಕೆ ಮಾಡುವ ಜಾಲದ ಮೇಲೂ ಅಬಕಾರಿ ಇಲಾಖೆ ನಿರಂತರ ನಿಗಾ ವಹಿಸಬೇಕು. ಅಕ್ರಮ ಮದ್ಯ ಮಾರಾಟಗಾರರ ಜೊತೆ ಕೈಜೋಡಿಸಿ ಇಲಾಖೆ ಕಾರ್ಯನಿರ್ವಹಿಸಬಾರದು.”
— ಶಿವಪುತ್ರ ಮಲ್ಲಾಡದ, ರೈತ ಮುಖಂಡರು, ರಾಣೇಬೆನ್ನೂರು