ಬೀದರ್: ಜಿಲ್ಲೆಯ ಔರಾದ್-ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಖಂಡಿಕೇರಿ ಗ್ರಾಮದಲ್ಲಿ ಕಾನೂನುಬಾಹಿರವಾಗಿ ಬೆಳೆದಿದ್ದ ₹30 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ (ಐಪಿಎಸ್) ಅವರ ನೇರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಹಾಗೂ ಭಾಲ್ಕಿ ಉಪ-ವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರ ಮುಂದಾಳತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಕಾರ್ಯಾಚರಣೆಯ ವಿವರ:
ಔರಾದ್-ಬಿ ವೃತ್ತದ ಸಿಪಿಐ ರಘುವೀರಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ, ಪಿಎಸ್ಐ ವಸೀಮ್ ಪಟೇಲ್, ರೇಣುಕಾ ಹಾಗೂ ಸಿಬ್ಬಂದಿಗಳಾದ ಹರೀಶಕುಮಾರ, ಜ್ಞಾನೇಶ್ವರ, ಅರುಣ, ಸಂಜುಕುಮಾರ, ಯೋಗೇಶ, ಗೌತಮ ಮತ್ತು ಶ್ರೀಕಾಂತ ರೆಡ್ಡಿ ಅವರನ್ನೊಳಗೊಂಡ ತಂಡ ಖಂಡಿಕೇರಿ ಗ್ರಾಮದ ಹೊಲಕ್ಕೆ ದಾಳಿ ನಡೆಸಿತ್ತು.
ಔರಾದ್ (ಬಿ) ತಹಸೀಲ್ದಾರ್ (ಪತ್ರಾಂಕಿತ ಅಧಿಕಾರಿ) ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿ, ಹೊಲದಲ್ಲಿದ್ದ 100 ಹಸಿ ಗಾಂಜಾ ಗಿಡಗಳನ್ನು ಕಿತ್ತು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಗಾಂಜಾ ಗಿಡಗಳ ಒಟ್ಟು ತೂಕ 60 ಕೆ.ಜಿ 430 ಗ್ರಾಂ ಇದ್ದು, ಇದರ ಅಂದಾಜು ಮೌಲ್ಯ ₹30,21,500 ಎಂದು ತಿಳಿದುಬಂದಿದೆ.
ಪೊಲೀಸ್ ಸಿಬ್ಬಂದಿಗೆ ಶ್ಲಾಘನೆ – ಎಸ್ಪಿ ಎಚ್ಚರಿಕೆ:
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಎಸ್ಪಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಾದಕ ವಸ್ತುಗಳನ್ನು ಬೆಳೆಸುವುದು, ಸರಬರಾಜು ಮಾಡುವುದು ಅಥವಾ ಸೇವಿಸುವುದು ಗಂಭೀರ ಅಪರಾಧ. ಸಾರ್ವಜನಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಹಾಗೂ ಕುಟುಂಬದ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು. ಬೀದರ್ ಜಿಲ್ಲೆಯನ್ನು ಸಂಪೂರ್ಣ ನಶಾ ಮುಕ್ತಗೊಳಿಸಲು ಜಿಲ್ಲಾ ಪೊಲೀಸರ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ,” ಎಂದು ಎಚ್ಚರಿಸಿದ್ದಾರೆ.
