ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕೆ.ಆರ್. ಮಾರುಕಟ್ಟೆಗೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳ ಪ್ರವೇಶ ಶುಲ್ಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಆದಾಯ ಸೋರಿಕೆಗೆ ತಡೆ ನೀಡಲು ಕೇಂದ್ರ ನಗರ ಪಾಲಿಕೆ ನೂತನ ‘ಟೋಲ್ ಗೇಟ್’ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.
ಪ್ರಸ್ತುತ ಮಾರುಕಟ್ಟೆಗೆ ಆಗಮಿಸುವ ಸರಕು ವಾಹನಗಳಿಂದ ದಿನಕ್ಕೆ ಕೇವಲ ₹4,000 ಮಾತ್ರ ಸಂಗ್ರಹವಾಗುತ್ತಿದ್ದು, ತೀವ್ರ ಆದಾಯ ಸೋರಿಕೆಯಾಗುತ್ತಿತ್ತು. ಮಾರುಕಟ್ಟೆಯ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ವ್ಯವಸ್ಥಿತ ಟೋಲ್ ಗೇಟ್‌ಗಳನ್ನು ನಿರ್ಮಿಸುವ ಮೂಲಕ ದಿನನಿತ್ಯದ ಆದಾಯವನ್ನು ₹10,000ಕ್ಕೂ ಅಧಿಕ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದ್ದಾರೆ.
ಆರ್‌ಟಿಸಿ ತೋರಿಸಿದರೆ ರೈತರಿಗೆ ಕಡ್ಡಾಯ ಉಚಿತ:
ಈ ನೂತನ ಯೋಜನೆಯಲ್ಲಿ ಶ್ರಮಿಕ ರೈತರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಮ್ಮ ಜಮೀನಿನ ಆರ್‌ಟಿಸಿ (RTC) ದಾಖಲೆಯನ್ನು ಹಾಜರುಪಡಿಸುವ ರೈತರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಕೇವಲ ವ್ಯಾಪಾರಿಗಳು, ಏಜೆಂಟರು ಹಾಗೂ ಮಧ್ಯವರ್ತಿಗಳಿಗೆ ಮಾತ್ರ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದು, ರೈತರಿಗೆ ನೇರ ಅನುಕೂಲ ಸಿಗಲಿದೆ.
ನಿಗದಿತ ಶುಲ್ಕದ ವಿವರ:
ವಾಹನಗಳ ಆಧಾರದ ಮೇಲೆ:
ಟ್ರಕ್ ಹಾಗೂ 6 ಚಕ್ರಗಳ ದೊಡ್ಡ ವಾಹನಗಳು: ₹350
4 ಚಕ್ರಗಳ ಗೂಡ್ಸ್ ವಾಹನಗಳು: ₹100
3 ಚಕ್ರಗಳ ಸರಕು ವಾಹನಗಳು: ₹75
ಸರಕುಗಳ ಆಧಾರದ ಮೇಲೆ:
ಹಣ್ಣು, ಹೂವು, ತರಕಾರಿ ಹಾಗೂ ಸೊಪ್ಪಿನ ಚೀಲ: ಪ್ರತಿ ಚೀಲಕ್ಕೆ ₹5
ಮೊಟ್ಟೆ (10 ಟ್ರೇಗಳವರೆಗೆ): ಪ್ರತಿ ಬಾಕ್ಸ್‌ಗೆ ₹10
ಮೀನು, ಸಮುದ್ರ ಆಹಾರ ಮತ್ತು ಮಾಂಸ: ಪ್ರತಿ ಬಾಕ್ಸ್/ಟ್ರೇಗೆ ₹10